ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸೌಹಾರ್ದ ಇದ್ದರೆ ಮುಂದಿನ ದಿನಗಳಲ್ಲಿ ದೇಶದ ಉನ್ನತ ಪ್ರಜೆಗಳಾಗಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ರಾಜಕಾರಣಿಗಳ ಷಡ್ಯಂತ್ರಕ್ಕೆ ತಲೆಬಾಗದೆ ಉತ್ತಮ ಪ್ರಜೆಗಳಾಗಲು ಮುಂದಡಿ ಇಡಬೇಕು. ಶಾಲಾ ಜೀವನದಲ್ಲಿರುವ ಸೌಹಾರ್ದ ಮುಂದಿನ ಜೀವನದಲ್ಲೂ ಇರಬೇಕು ಎಂದು ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಭಾ ಹೇಳಿದರು.
ಇನೋಳಿ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೊಣಾಜೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಇನೋಳಿ ಶಾಲೆಯಲ್ಲಿ ಮಂಗಳವಾರ ಕೊಣಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ಹೊರತರಲು ಇರುವ ವೇದಿಕೆಯನ್ನು ಸಮರ್ಪಕ ರೀತಿಯಲ್ಲಿ ಬಳಸಬೇಕು ಎಂದರು.
ಶಿಕ್ಷಣ ಪ್ರೇಮಿ ಆಶಾ ನಾಯಕ್ ಪ್ರತಿಭಾ ಕಾರಂಜಿ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಮಹಮ್ಮದ್ ಇಕ್ಬಾಲ್, ವಲೇರಿಯನ್ ಡಿಸೋಜ, ಮಹಮ್ಮದ್ ಅನ್ಸಾರ್ ಇನೋಳಿ, ಖತೀಜಾ ಬಾನು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಅಬ್ದುಲ್ ಖಾದರ್, ಕೊಣಾಜೆ ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ರಾವ್, ನಿವೃತ್ತ ಶಿಕ್ಷಕಿ ಸಲಿನಾ ಲೋಬೊ, ತೀರ್ಪುಗಾರರಾದ ಸವಿತಾ, ಉಸ್ಮಾನ್ ಫೈಝಿ, ಇನೋಳಿ ಮಸೀದಿಯ ಮುಅದ್ದಿನ್ ಅಹ್ಮದ್ ಮುಸ್ಲಿಯಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕ್ಲಸ್ಟರ್ ಸಿಆರ್‌ಪಿ ರೆಹನಾ ಸ್ವಾಗತಿಸಿದರು. ಸಮನ್ವಯಾಧಿಕಾರಿ ಸುಶ್ಮಾ ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ನಳಿನಿ ವಂದಿಸಿದರು. ಶಿಕ್ಷಕಿ ಪ್ರಿಯಾ ನಿರೂಪಿಸಿದರು.
ಪಾವೂರು ಗ್ರಾಮಕ್ಕೆ ಇನೋಳಿ ಕೊನೆಯ ಭಾಗದಲ್ಲಿರುವ ಶಾಲೆ 1959ರಲ್ಲಿ ಆರಂಭವಾದರೂ ಅಭಿವೃದ್ಧಿಯಲ್ಲೂ ಹಿಂದುಳಿದಿದೆ. ಸಮರ್ಪಕ ರಸ್ತೆ ಇಲ್ಲದಿದ್ದರೂ ಕ್ಲಸ್ಟರ್ ಮಟ್ಟದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗದಂತೆ ಹಳೇ ವಿದ್ಯಾರ್ಥಿಗಳು ಅಹೋರಾತ್ರಿ ಶ್ರಮಪಟ್ಟು ವ್ಯವಸ್ಥೆ ಮಾಡಿದ್ದಾರೆ. - ಮಹಮ್ಮದ್ ಅನ್ಸಾರ್ ಇನೋಳಿ, ಉಪಾಧ್ಯಕ್ಷರು, ಪಾವೂರು ಗ್ರಾ.ಪಂ.