

ಕುಶಾಲನಗರ: ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧೆಗಳು ನಾಡಿನ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಯಾಗಿದ್ದು, ಪಠ್ಯದ ಜತೆಗೆ ಮಕ್ಕಳ ಪ್ರತಿಭಾ ಅನ್ವೇಷಣೆಗೆ ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಅತ್ತೂರು ಜ್ಞಾನಗಂಗಾ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಮನೋವಿಕಾಸ ಬೆಳವಣಿಗೆಯೊಂದಿಗೆ ಸ್ಪರ್ಧಾ ಮನೋಭಾವ ಬೆಳೆಯಲು ಉತ್ತಮ ವೇದಿಕೆ ಒದಗಿಸುತ್ತವೆ ಎಂದು ತಿಳಿಸಿದರು.
ಸೋಮವಾರಪೇಟೆ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿ.ಮಂಜೇಶ್ ಮಾತನಾಡಿ, ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಇಂತಹ ಸ್ಪರ್ಧೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಮಕ್ಕಳ ಪ್ರತಿಭೆಯನ್ನು ಹೊರತರಲು ಸಾಧ್ಯ. ಈ ಸ್ಪರ್ಧೆಯು ಮಕ್ಕಳಿಗೆ ಪಠ್ಯದ ಜತೆಗೆ ಕಲೆ, ಸಂಸ್ಕೃತಿಯ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಐಶ್ವರ್ಯಾ ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ರಾಮ್ ದೇವಯ್ಯ, ಶಿಕ್ಷಣ ಇಲಾಖೆ ಸಮಾನ್ವಯಾಧಿಕಾರಿ ಹೇಮಂತ್, ಜ್ಞಾನಗಂಗಾ ವಸತಿ ಶಾಲೆ ಪ್ರಾಂಶುಪಾಲೆ ಪ್ರಿಯಂಕಾ ನಾಯ್ಡು, ಉಪ ಪ್ರಾಂಶುಪಾಲ ನಾಗರಾಜು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಎ.ಯೋಗೇಶ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲೂಕು ಘಟಕದ ಅಧ್ಯಕ್ಷ ಟಿ.ಕೆ.ಬಸವರಾಜು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ರತ್ನಕುಮಾರ್, ಸುಕುಮಾರಿ, ಶಿಕ್ಷಣ ಸಂಯೋಜಕ ರಾಧಕೃಷ್ಣ, ಬಿಆರ್‌ಪಿ ಲೋಕೇಶ್, ಶಿವಕುಮಾರ್, ಮಮತಾ, ಶಾಂತಕುಮಾರ್, ಸಿಆರ್‌ಪಿ ವೈಶಾಲಿ, ನೋಡಲ್ ಅಧಿಕಾರಿ ಶೇಖರ್, ಕೂಡಿಗೆ ಸಿಆರ್‌ಪಿ ಶಾಂತಕುಮಾರ್ ಇದ್ದರು.
ಮಕ್ಕಳ ಪ್ರತಿಭೆ ಅನಾವರಣ: ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಹಾಡು, ನೃತ್ಯ, ಛದ್ಮವೇಷ, ಭಾಷಣ, ಆಶುಭಾಷಣ, ಧಾರ್ಮಿಕ ಪಠಣ, ಜಾನಪದ ನೃತ್ಯ, ರಂಗೋಲಿ, ಚಿತ್ರಕಲೆ, ಕಥೆ ಹೇಳುವುದು, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಮಣ್ಣಿನ ಮಾದರಿ ತಯಾರಿಕೆ ಪ್ರೇಕ್ಷಕರ ಗಮನ ಸೆಳೆದವು.