

ಮಡಿಕೇರಿ
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದರ ಜತೆಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು. ಆಟೋಟವು ಸಹ ಇರಬೇಕು. ಆದರೆ ಮೊಬೈಲ್ ನೋಡುವ ಗೀಳು ಇರಬಾರದು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ ವಿದ್ಯಾರ್ಥಿಗಳು ಓದಿನ ಜತೆಗೆ ಸಂಗೀತ, ಕಲೆ, ನಾಟಕ, ನೃತ್ಯ ಹೀಗೆ ವಿವಿಧ ಪ್ರಾಕಾರಗಳಲ್ಲಿ ತೊಡಗಿಸಿಕೊಂಡು ಹೊಸತನ ಕಲಿಯಲು ಪ್ರಯತ್ನಿಸಬೇಕು, ಇದರಿಂದ ಪ್ರತಿಭೆ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಸಂತಸ, ನೆಮ್ಮದಿ ಇರಲು ಓದಿನ ಜತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರಾಣಿ, ಪಕ್ಷಿ, ಗಿಡ, ಮರ, ಹಸಿರು ನೋಡಿದರೆ ಒಂದು ರೀತಿ ಉಲ್ಲಾಸ ಉಂಟಾಗುತ್ತದೆ. ಇದರಿಂದ ಸಕಾರಾತ್ಮಕವಾಗಿ ಯೋಚಿಸಲು ಸಹಕಾರಿಯಾಗಲಿದೆ ಎಂದರು.
ಸಂತ ಮೈಕಲರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಫಾದರ್ ಸಂಜಯ್ ಕುಮಾರ್ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಹುಟ್ಟುವಾಗ ಉಸಿರು ಇರುತ್ತದೆ, ಸಾಯುವಾಗ ಹೆಸರು ಇರುತ್ತದೆ. ಆದ್ದರಿಂದ ಉಸಿರು ಮತ್ತು ಹೆಸರಿನ ನಡುವೆ ಕೆಸರು ಎರಚದೆ, ಸಮಾಜದಲ್ಲಿ ಉತ್ತಮ ಬದುಕು ನಡೆಸುವತ್ತ ಚಿಂತಿಸಬೇಕು. ಆ ನಿಟ್ಟಿನಲ್ಲಿ ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಆದ್ದರಿಂದ ನಿರಂತರ ಸ್ಪರ್ಧೆಯಿಂದ ಒಂದಲ್ಲ ಒಂದು ದಿನ ಯಶಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಶಿಕ್ಷಣಾಧಿಕಾರಿ ಮಹದೇವ ಸ್ವಾಮಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಬಿಂದು, ಡಾ.ಸದಾಶಿವ ಪಲ್ಲೇದ್, ಪಿ.ಎ.ಪ್ರವೀಣ್, ಎ.ಸೋಮಯ್ಯ, ಬಿ.ಟಿ.ಪೂರ್ಣೇಶ್, ಮೋಹನ್ ಪೆರಾಜೆ, ಕಿರಣ್ ಪಿ.ಎಂ., ಅಶೋಕ್ ಕೆ.ಜಿ., ಇತರರು ಇದ್ದರು.
ಭಾಷಣ ಸ್ಪರ್ಧೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಪ್ರಬಂಧ ರಚನೆ, ಚಿತ್ರಕಲೆ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್, ಕವನ, ಪದ್ಯವಾಚನ, ಆಶುಭಾಷಣ ಸ್ಪರ್ಧೆ, ಹೀಗೆ ವಿವಿಧ ಪ್ರತಿಭಾ ಕಾರಂಜಿ ಹಾಗೂ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ನಾನಾ ಶಾಲೆಗಳಿಂದ 135 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.