ರಾಜಕೀಯಕ್ಕೆ ಪ್ರತಿಭಾ ಕಾರಂಜಿ ರದ್ದು: ಡಿಡಿಪಿಐಗೆ ಗ್ರಾಮಸ್ಥರ ತರಾಟೆ

WhatsApp Image 2022-08-26 at 2.58.46 PM
Published on

ಮಂಡ್ಯ: ತಾಲೂಕಿನ ದುದ್ದ ಹೋಬಳಿ ಹುಲಿಕೆರೆ ಗ್ರಾಮದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ರಾಜಕೀಯ ಕಾರಣಕ್ಕೆ ರದ್ದುಗೊಂಡಿದೆ. ಇದಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಅಧಿಕಾರಿಗಳೇ ಕಾರಣವೆಂದು ಆರೋಪಿಸಿ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾದ್ಯಂತ ಪ್ರತಿಭಾ ಕಾರಂಜಿ ಸರಣಿಯಾಗಿ ನಡೆಯುತ್ತಿವೆ. ಅದರಂತೆ ಹುಲಿಕೆರೆ ಕ್ಲಸ್ಟರ್ ಮಟ್ಟದಲ್ಲಿಯೂ ಆಯೋಜನೆಗೊಂಡಿತ್ತು. ಗುರುವಾರ ಸಂಜೆವರೆಗೂ ಸುಮ್ಮನಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಘೋಷಣೆ ಮಾಡಿದ್ದಾರೆ. ಇತ್ತ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲೆಂದು ಹಣ ಸಂಗ್ರಹಿಸಿದ್ದ ಗ್ರಾಮಸ್ಥರು ಸಿಟ್ಟಿಗೆದ್ದು ಪ್ರತಿಭಟನೆ ನಡೆಸಿದರು. ಈ ನಡುವೆ ಮಾಹಿತಿ ಇಲ್ಲದೆ ಕೆಲ ವಿದ್ಯಾರ್ಥಿಗಳು ಆಗಮಿಸಿ ಬೇಸರದಿಂದ ವಾಪಸಾದರು.
ರದ್ದುಗೊಳಿಸಲು ಕಾರಣವೇನು?: ಕಾರ್ಯಕ್ರಮ ರದ್ದುಗೊಳಿಸಿದರ ಹಿಂದೆ ಇಲಾಖೆಯಿಂದ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಆದರೆ ರಾಜಕೀಯ ಕಾರಣಕ್ಕೆ ಈ ರೀತಿ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯರು ಹಾಗೂ ರೈತ ಸಂಘದ ಪದಾಧಿಕಾರಿಗಳು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಾ ಕಾರಂಜಿಗೆ ಸ್ಥಳೀಯ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಆಹ್ವಾನಿಸಲಾಗಿದೆ. ಅಂತೆಯೇ ಇವರೊಟ್ಟಿಗೆ ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಬಿಜೆಪಿ ನಾಯಕ ಡಾ.ಇಂದ್ರೇಶ್ ಅವರಿಗೂ ಆಹ್ವಾನ ನೀಡಲಾಗಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ. ಇಬ್ಬರಿಗೆ ಆಹ್ವಾನ ಕೊಟ್ಟಿರುವುದಕ್ಕೆ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ ಆರೋಪಿಸಿದರು. ಕೂಡಲೇ ಡಿಡಿಪಿಐ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಡಿಡಿಪಿಐಗೆ ಕ್ಲಾಸ್: ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಡಿಡಿಪಿಐ ಜವರೇಗೌಡ ಅವರಿಗೆ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಏಕಾಏಕಿ ಕಾರ್ಯಕ್ರಮ ರದ್ದುಗೊಳಿಸಲು ಕಾರಣವೇನೆಂದು ಬಹಿರಂಗಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಅವರಿಂದಲೂ ಸ್ಪಷ್ಟ ಉತ್ತರ ಸಿಗಲಿಲ್ಲ.  
ಇತ್ತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾಗವಹಿಸುವ ಎಲ್ಲರಿಗೂ ಊಟ ಹಾಗೂ ಬಹುಮಾನ ನೀಡಲೆಂದು ಗ್ರಾಮಸ್ಥರು ಹಣ ಸಂಗ್ರಹಿಸಿದರು. ಕಾರ್ಯಕ್ರಮ ರದ್ದುಗೊಂಡಿರುವುದರಿಂದ ಇಲಾಖೆಯೇ ವೆಚ್ಚ ಭರಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಒಪ್ಪಿದ ಡಿಡಿಪಿಐ, ಮುಂದಿನ ವಾರ ಕಾರ್ಯಕ್ರಮವನ್ನು ಇಲಾಖೆಯಿಂದಲೇ ಮಾಡಲಾಗುವುದು ಎನ್ನುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. 
ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್, ಎಣ್ಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಮದನ್, ಅಂಜನ್, ಬಸವಣ್ಣ, ಸ್ವಾಮಿ, ಮಾಚಹಳ್ಳಿ ರಾಜು, ಹುಲಿಕೆರೆ ಸಂತೋಷ್, ಗ್ರಾಪಂ ಸದಸ್ಯರಾದ ಸೋಮಶೇಖರ್, ಮಧು, ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net