

ಮಡಿಕೇರಿ: ಸರ್ಕಾರ ನೀಡುವ ಅನುದಾನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗಾಯಣ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಅಗತ್ಯವುಳ್ಳ ಕಲಾವಿದರಿಗೆ ನೆರವಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಶ್ಲಾಘಿಸಿದರು.
ಭಾರತೀಯ ವಿದ್ಯಾಭವನ, ಕರ್ನಾಟಕ ಲಲಿತಕಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ೩ ದಿನಗಳ ಕಲಾಶಿಬಿರಕ್ಕೆ ಚಿತ್ರಕ್ಕೆ ಬಣ್ಣಹಚ್ಚುವ ಮೂಲಕ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕೆಲವರು ಕಾರ್ಯಕ್ರಮಗಳ ಅನುಷ್ಟಾನಕ್ಕಿಂತ ಭಾಷಣಕ್ಕೆ ಮಾತ್ರ ಸೀಮಿತರಾಗುತ್ತಾರೆ. ಆದರೆ, ಲಲಿತಕಲಾ ಅಕಾಡೆಮಿ ಹಾಗೂ ರಂಗಾಯಣ ಈ ಆರ್ಥಿಕ ಸಾಲಿನಲ್ಲಿ ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಕಲಾವಿದರ ನೆರವಿಗೆ ಮುಂದಾಗಿದೆ ಎಂದರು.
ಲಲಿತಕಲಾ ಅಕಾಡೆಮಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಲಾವಿದರಿಗಾಗಿ ಮೀಸಲಾಗಿದ್ದ ೧.೪೦ ಕೋಟಿ ರು. ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿರುವುದು ಅಕಾಡೆಮಿ ಅಧ್ಯಕ್ಷರ ಬದ್ಧತೆಗೆ ಸಾಕ್ಷಿ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು ರಂಗರೂಪಕ್ಕೆ ತರುವ ಮೂಲಕ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಗಮನಾರ್ಹ ಕಾರ್ಯ ಮಾಡಿದ್ದಾರೆ. ರಂಗಾಯಣ ಈಗ ರಂಗ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಮಾತನಾಡಿ, ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸದೇ ಜನಸಮುದಾಯವೂ ಕೂಡ ಸರ್ಕಾರದ ಕಾರ್ಯ ಯೋಜನೆಗಳಿಗೆ ಕೈಜೋಡಿಸಬೇಕಾಗಿದೆ. ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿಯೂ ಲಲಿತಕಲಾ ಅಕಾಡೆಮಿ ಸಕ್ರಿಯವಾಗಿದ್ದು, ಕಲಾವಿದರಿಗೆ ಆರ್ಥಿಕ ನೆರವು ನೀಡಿದೆ ಎಂದರು.
ಕರೊನಾದಿಂದಾಗಿ ಕಾರ್ಯಕ್ರಮ ಆನ್‌ಲೈನ್‌ನಲ್ಲಿ ನಡೆಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಅಕಾಡೆಮಿ ಮುಂದು ವರಿಸಿದೆ. ೫೦ ವರ್ಷ ಪೂರೈಸಿರುವ ಲಲಿತಕಲಾ ಅಕಾಡೆಮಿಯು ಕೊಡಗಿನಂಥ ಪ್ರಾಕತ್ತಿಕ ಸಂಪತ್ತಿನ ಜಿಲ್ಲೆಯಲ್ಲಿ ಕಲಾಶಿಬಿರ ಭವಿಷ್ಯದಲ್ಲಿ ಯೂ ಆಯೋಜಿಸಲಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿವೃತ್ತ ಆಯುಕ್ತ ಕೆ.ಆರ್. ರಾಮಕಷ್ಣ ಮಾತನಾಡಿ, ಗಿರಿಶ್ರೇಣಿಗಳಿಂದ ಕೂಡಿರುವ ಮಡಿಕೇರಿಯಲ್ಲಿ ಕಲಾವಿದರಿಗೆ ಹೊಸ ಸ್ಫೂರ್ತಿ ದೊರಕುತ್ತದೆ. ಕೊಡಗು ಕಲಾಶಿಬಿರಗಳಿಗೆ ಹೇಳಿ ಮಾಡಿಸಿದ ತಾಣದಂತಿದೆ. ಜಗತ್ತಿನ ಅತ್ಯುತ್ತಮ ತಾಣಗಳಲ್ಲಿ ಕೊಡಗು ಕೂಡ ಒಂದಾಗಿದೆ ಎಂದು ಶ್ಲಾಘಿಸಿದರು.
ಭಾರತೀಯ ವಿದ್ಯಾಭವನ ಬೆಂಗಳೂರು ಕೇಂದ್ರದ ನಿರ್ದೇಶಕಿ ನಾಗಲಕ್ಷ್ಮಿ ಮಾತನಾಡಿ, ದೇಶದ ಪ್ರಾಚೀನ ಸಂಪ್ರದಾಯಗಳ ಮೌಲ್ಯ ವಿದೇಶಿ ಯರು ಕೂಡ ಅನುಕರಿಸುತ್ತಿದ್ದಾರೆ. ದೇವಾಲಯ, ಸ್ಮಾರಕ, ಶಿಲ್ಪಕಲೆಗಳ ಕಲಾವೈಭವ ಜಗತ್ತಿಗೇ ಮಾದರಿ. ಕಲಾವಿದರಂತೆಯೇ ಕಲಾಸಕ್ತ ರಿಂದ ಕೂಡ ದೇಶಿಯ ಕಲೆಗಳು ಜನಮನದಲ್ಲಿದೆ ಎಂದರು.
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತನಾಡಿ, ತಮ್ಮ ಶಾಲೆಯಲ್ಲಿ ಕಲಾಶಿಬಿರಕ್ಕೆ ಅವಕಾಶ ನೀಡಲು ಹೆಮ್ಮೆಯಾಗಿದೆ ಎಂದು ಹೇಳಿದರು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಕೊಡಗಿನಲ್ಲಿ ಮುಂದಿನ ದಿನಗಳಲ್ಲಿಯೂ ಕಲಾವಿದರಿಗೆ ಪ್ರಯೋಜನವಾಗುವ ಕಲಾಶಿಬಿರಗಳಿಗೆ ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರ ಸಹಕಾರ ನೀಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಭಾರತೀಯ ವಿದ್ಯಾಭವನ ಉಪನಿರ್ದೇಶಕ ಅಶೋಕ್‌ಕುಮಾರ್, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಬೆಂಗಳೂರು ಚಿತ್ರಕಲಾ ಸಂಜೆ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಚೌಹಾಣ್ ಇದ್ದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ ಸ್ವಾಗತಿಸಿದರು. ಕಲಾಶಿಬಿರ ನಿರ್ವಾಹಕ ರೂಪೇಶ್ ನಾಣಯ್ಯ ವಂದಿಸಿದರು. ಚಿತ್ರಾ ನಂಜಪ್ಪ ಪ್ರಾರ್ಥಿಸಿದರು.
ಹಾಸನದ ವಸಂತಕುಮಾರ್, ವಿಜಯಪುರದ ಎಂ. ಆರತಿ, ಹೊಸಕೋಟೆಯ ಎಚ್.ಎಂ. ಪ್ರವೀಣ್ ಕುಮಾರ್, ಚಿತ್ರದುರ್ಗದ ಎಚ್.ಡಿ. ವೀರೇಂದ್ರಕುಮಾರ್, ಬೆಂಗಳೂರಿನ ಗಾಣಿಗೇರ ಅಪ್ಪಾ ಸಾಹೇಬ, ಉಡುಪಿಯ ಸಂತೋಷ್ ಮಾಳ, ಬಾಗಲಕೋಟೆಯ ಪ್ರಿಯಾಂಕ ಶಹಪೂರ, ಬಳ್ಳಾರಿಯ ಡಾ.ಕಷ್ಣವೇಣಿ, ದಾವಣಗೆರೆಯ ಸಿ.ಬೋರಯ್ಯ, ಚಾಮರಾಜನಗರದ ಎಸ್. ಮಧುಸೂದನ ಕಲಾಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
======