ಪ್ರತಾಪ್‌ಸಿಂಹ ಹೇಳಿಕೆಗೆ ಸ್ವಪಕ್ಷದಿಂದಲೇ ತೀವ್ರ ಆಕ್ಷೇಪ

pratap simha 3
Published on

ಮೈಸೂರು: ಮಹಿಷ ದಸರಾ ಆಚರಣೆ ನಿಲ್ಲಿಸಲು ಸಂಘರ್ಷಕ್ಕೂ ಸಿದ್ಧ ಎನ್ನುವ ಸಂಸದ ಪ್ರತಾಪ್‌ಸಿಂಹ ಹೇಳಿಕೆಗೆ ಸ್ವಪಕ್ಷ ಬಿಜೆಪಿಯವರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೋಮು ಸೌಹಾರ್ದ ಹಾಳು ಮಾಡುವ ಹೇಳಿಕೆ ನೀಡಿ, ಸಂಘರ್ಷದ ಮಾತನ್ನಾಡುತ್ತಿರುವ ಪ್ರತಾಪ್ ಸಿಂಹ ಈಗ ಮಹಿಷ ದಸರಾ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ವಿ.ಗಿರಿಧರ್ ವಂಶಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಹಿಷ ದಸರಾಕ್ಕೆ ಸಂಸದರ ವಿರೋಧ ಇದೆಯೇ ಹೊರತು ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆಯಲು ಪ್ರತಾಪ್ ಸಿಂಹ ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಸಂಘರ್ಷದ ಮಾತುಗಳನ್ನಾಡುವ ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಕೋಮು ಸಂಘರ್ಷ ಉಂಟಾದರೆ ಅದರ ಪರಿಣಾಮ ಎದುರಿಸುವವರು ತಳಮಟ್ಟದಲ್ಲಿ ಇರುವ ನನ್ನಂತಹ ಕಾರ್ಯಕರ್ತರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲರೂ ಸೌಹಾರ್ದದಿಂದ ಬದುಕು ನಡೆಸುತ್ತಿದ್ದೇವೆ. ಆದರೆ ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ಗಲಭೆ ಉಂಟಾದರೆ ಪೊಲೀಸ್ ರಕ್ಷಣೆಯಲ್ಲಿ ಅವರು ಮನೆಯಲ್ಲಿ ಕುಳಿತಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಹಿಂದೆ ದಲಿತರ ಮೇಲೆ ದೌರ್ಜನ್ಯ ನಡೆದಾಗ ಇವರು ಮಾತನಾಡಿರಲಿಲ್ಲ. ಒಕ್ಕಲಿಗ ಸಮುದಾಯ ಹಾಗೂ ಮುಸ್ಲಿಮರ ವಿರುದ್ಧ ವೈಷಮ್ಯ ಬಿತ್ತುವ ಯತ್ನವಾಗಿ ಟಿಪ್ಪುವನ್ನು ಒಕ್ಕಲಿಗ ಸಮುದಾಯದ ಉರಿಗೌಡ ಹಾಗೂ ನಂಜೇಗೌಡ ಕೊಂದಿದ್ದರೆಂದು ಕಟ್ಟುಕಥೆ ಕಟ್ಟಿದ್ದರು ಎಂದು ಟೀಕಿಸಿದರು.
ಮುಖಂಡರಾದ ಕುಮಾರ್, ನಾಗಣ್ಣ, ಸತೀಶ್, ಇತರರು ಇದ್ದರು.

ಬಿಜೆಪಿ ಎಸ್‌ಸಿ ಮೋರ್ಚಾ ಖಂಡನೆ:
ಸಂಸದ ಪ್ರತಾಪ್ ಸಿಂಹ ಅವರ ಸಂಘರ್ಷದ ಹೇಳಿಕೆ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ.ಈಶ್ವರ್ ಟೀಕಿಸಿದರು.
ಮಹಿಷ ದಸರಾ ಆಚರಣೆ ಸಂಬಂಧ ಮಾಧ್ಯಮದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಶೋಷಿತ ಸಮುದಾಯಗಳ ಸ್ವಾಭಿಮಾನ ಕೆಣಕುವ ಹೇಳಿಕೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾವುದೇ ಸಮುದಾಯದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಮುಕ್ತವಾಗಿ ಅನುಸರಿಸಲು ಸಂಪೂರ್ಣ ಅಧಿಕಾರವನ್ನು ಸಂವಿಧಾನ ನೀಡಿದೆ. ಆದರೆ ಪ್ರತಾಪ್ ಸಿಂಹ ಶೋಷಿತರು ಮತ್ತು ಹಿಂದುಳಿದ ವರ್ಗದವರು ಭಾವನೆಗಳನ್ನು ಉದ್ರಿಕ್ತಗೊಳಿಸುವ ಹೇಳಿಕೆ ನೀಡುವ ಮೂಲಕ ಮೂಲ ಆಶಯವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.
ದಲಿತ, ಶೋಷಿತ ಸಮುದಾಯದ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ಇವರ ನಡವಳಿಕೆ ಹೀಗೆಯೇ ಮುಂದುವರಿದರೆ ಪಕ್ಷಕ್ಕೆ ತುಂಬಲಾರದ ನಷ್ಟವಾಗುವುದಲ್ಲದೆ, ನಮ್ಮಂತಹ ಕಾರ್ಯಕರ್ತರಿಗೆ ಮುಜುಗರವಾಗುತ್ತದೆ. ಆದ್ದರಿಂದ ಪಕ್ಷದ ವರಿಷ್ಠರು ಕೂಡಲೇ ಮಧ್ಯಪ್ರವೇಶಿಸಿ ಪ್ರತಾಪ್ ಸಿಂಹ ಅವರಿಗೆ ಸೂಕ್ತ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮುರಳೀಧರ, ಜೆ.ರವಿ, ರಾಜೀವ್, ಶರತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net