

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ವಿಷಯದಲ್ಲಿ ಸಂಸದ ಪ್ರತಾಪ್‌ಸಿಂಹ ಸುಮ್ಮನೆ ಬುರುಡೆ ಬಿಡ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹರಿಹಾಯ್ದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್‌ಸಿಂಹ ಏನು ಮೇಸ್ತ್ರಿ ಏನ್ರೀ? ಸಿದ್ದರಾಮಯ್ಯ ಅವರಿಗೆ ಪ್ರತಾಪ್‌ಸಿಂಹ ಸರಿಸಮಾನನಾದ ನಾಯಕನಾ ಎಂದು ಪ್ರಶ್ನಿಸಿದರು.
ರಾಜ್ಯ ಹೆದ್ದಾರಿ ಆಗಿದ್ದಾಗ ಪ್ರತಾಪ್‌ಸಿಂಹ ಸಂಸದ ಆಗಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆದಾಗಲೂ ಪ್ರತಾಪ್‌ಸಿಂಹ ಸಂಸದನೇ ಆಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆದ ಮೇಲೆ ಅದನ್ನು ಮಾಡೊದು ಸರ್ಕಾರದ ಕೆಲಸ ಅಲ್ವೇ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇವರಿಗೆ ಇನ್‌ಚಾರ್ಜ್ ಕೊಟ್ಟಿದ್ರಾ? ಡಿಪಿಆರ್ ಮಾಡ್ಕೊಡು ಅಂತಾ ಕೇಳಿದ್ರಾ ಎಂದರು.
ಸುಮ್ಮನೆ ಬುರುಡೆ ಬಿಡುವ ಕೆಲಸ ಮಾಡಬಾರದು. ಕೆಲಸ ಮಾಡಿದ್ದರೆ ಖಂಡಿತ ಅಭಿನಂದನೆ ಸಲ್ಲಿಸುವೆ. ಒಂದು ಯೋಜನೆ ತಯಾರಾಗಲು ರಾಜ್ಯ ಸರ್ಕಾರಗಳು ಪ್ರಸ್ತಾಪ ಸಲ್ಲಿಸಿ, ಹಲವು ಹಂತಗಳ ನಂತರ ಹೆದ್ದಾರಿ ಆಗುತ್ತದೆ. ಆಗ ಇವರು ಎಂಪಿನೇ ಆಗಿರಲಿಲ್ಲ ಎಂದು ಕುಟುಕಿದರು
ಸುಮ್ಮನೆ ಹೇಳಿಕೆಗಳಿಗೆ ಮೈಲೇಜ್ ಕೊಡಬಾರದು. ಈ ಹೆದ್ದಾರಿಯಲ್ಲಿ ನೀರು ತುಂಬಿರೋದನ್ನು ನೋಡಲು ಇವರು ಏಕೆ ಹೋಗಿದ್ದರು? ಪ್ರವಾಹ ಬಂದರೆ ಎಲ್ಲರೂ ಹೋಗುತ್ತಾರೆ. ಹಾಗಂತ ನೀರಲ್ಲಿ ಬಿದ್ದು ನಾನೇ ಮರ, ಜನರನ್ನು ರಕ್ಷಣೆ ಮಾಡಿದ್ದು ಅಂದ್ರೆ ಹೇಗೆ? ಇದು ನಿಜಕ್ಕೂ ನಾನ್‌ಸೆನ್ಸ್ ಎಂದು ಕಿಡಿಕಾರಿದರು.
ಚಾಮರಾಜನಗರ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಂದರೆ ತುಂಬ ಸಂತೋಷ. ಅವರು ಬಂದು ನಿಂತರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸ್ತೀವಿ. ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರು ಬಯಸಿದರೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ, ಇದೆಲ್ಲ ಅಂತೆಕಂತೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ ಎಂದು ಮಹದೇವಪ್ಪ ಹೇಳಿದರು.
ಕಾಂಗ್ರೆಸ್ ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಆದರೆ, ಕೋಮುವಾದಿಗಳು ದೇಶವನ್ನು ವಿಭಜಿಸುವ ಕೃತ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಜಾರು ಹಾದಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಪುಟಿದೇಳಲಿದೆ ಎಂದರು.
ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕ ತೆರವುಗೊಳಿಸಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರವೇ ರಾಜ್ಯದಲ್ಲಿ ಕನ್ನಡ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಸಹೆ ನೀಡಿದರು.