

ಮೈಸೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಎಫ್‌ಎಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸಹೋದರನ ಹೆಸರನ್ನು ಎಫ್‌ಐಆರ್‌ನಿಂದ ಕೈ ಬಿಡಲು ಸಂಸದ ಪ್ರತಾಪಸಿಂಹ ಪ್ರಯತ್ನ ನಡೆಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಅನಧಿಕೃತವಾಗಿ ನೂರಾರು ಮರಗಳನ್ನು ಕಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹನ ವಿರುದ್ಧ ಈ ಹಿಂದೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಈಗ ಸಹೋದರನ ಹೆಸರು ಎಫ್‌ಐಆರ್‌ನಿಂದ ಕೈ ಬಿಡಲು ಪ್ರತಾಪಸಿಂಹ ಕೇಂದ್ರದ ಯಾವ ಸಚಿವರಿಂದ ಪ್ರಭಾವ ಬೀರಿಸಿದ್ದರು ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಕಲೇಶಪುರದಲ್ಲಿ ಸಿ.ಜಯಮ್ಮ ಮತ್ತು ಅವರ ತಮ್ಮ ಆನಂದ್ ಹೆಸರಿನಲ್ಲಿ ಇರುವ 3.16 ಎಕರೆ ಜಮೀನನ್ನು ಶುಂಠಿ ಬೆಳೆಯಲು ಒಂದು ತಿಂಗಳಿಗೆ ಕರಾರು ಮಾಡಿಕೊಳ್ಳುತ್ತಾರೆ. ಒಂದು ತಿಂಗಳಲ್ಲಿ ಶುಂಠಿ ಬೆಳೆಯಲು ಸಾಧ್ಯವೇ? ಅಲ್ಲದೇ ಸಕಲೇಶಪುರದಲ್ಲಿ ಎಲ್ಲಾದರೂ ಶುಂಠಿ ಬೆಳೆದಿದ್ದಾರೆಯೇ ಎಂದು ಜರಿದರು.
ಜಯಮ್ಮ ಅವರಿಗೆ ಸೇರಿದ ಜಮೀನಿನ ಪಕ್ಕದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿದ್ದ 236 ಮರಗಳನ್ನು ಕತ್ತರಿಸುವ ಅಗತ್ಯವೇನಿತ್ತು? ಆ ಮರಗಳನ್ನು ಕಡಿದು ವಿದೇಶಕ್ಕೆ ಸರಬರಾಜು ಮಾಡುವ ಉದ್ದೇಶ ಇತ್ತು ಎನ್ನಲಾಗಿದೆ. ಇಷ್ಟು ಮರಗಳನ್ನು ಕಡಿಯುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಕೈಕಟ್ಟಿ ನಿಂತಿದ್ದರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ನಿಮ್ಮನ್ನು ರಾಜಕೀಯವಾಗಿ ಮುಗಿಸುವಷ್ಟು ದೊಡ್ಡ ವ್ಯಕ್ತಿ ನೀವೇನಲ್ಲ. ಈ ಬಾರಿ ಟಿಕೆಟ್ ಸಿಕ್ಕಿ ಏನಾದರೂ ಕಣಕ್ಕೆ ಇಳಿದರೆ ಮತದಾರರು ಕಾಯುತ್ತಿದ್ದು, ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಕುಟುಕಿದರು.
ಸಿದ್ದರಾಮಯ್ಯ ಅವರ ವಿಚಾರ ಇಟ್ಟುಕೊಂಡು ಪ್ರತಾಪ್ ಸಿಂಹ ಒಕ್ಕಲಿಗ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎಂದಾದರೂ ನನ್ನ ಮಗ ಚುನಾವಣಾ ಆಕಾಂಕ್ಷಿ ಅಥವಾ ಅವನು ಈ ಬಾರಿ ಚುನಾವಣೆಗೆ ನಿಲ್ಲುತ್ತಾನೆ ಎಂದು ಹೇಳಿದ್ದಾರಾ? ಇಲ್ಲ್ಲ ಯತೀಂದ್ರ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದು ಹೇಳಿದ್ದಾರಾ? ಆದರೂ ಇಲ್ಲಸಲ್ಲದ ವಿಚಾರಗಳನ್ನು, ಭಾವನಾತ್ಮಕ ಮಾತುಗಳನ್ನು ಹೇಳಿಕೊಂಡು ಪ್ರತಾಪಸಿಂಹ ಅವರು ಜನರ ತಲೆಕೆಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ. ಮಹೇಶ್ ಇತರರು ಇದ್ದರು.