ಅರಮನೆಯಲ್ಲಿ ಆರಾಮಾಗಿದ್ದ ಯದುವೀರ್ ದೊಡ್ಡಗಡಿಯಾರ ಬಳಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ : ಪ್ರತಾಪ್ ಸಿಂಹ ವ್ಯಂಗ್ಯ

pratap simha
Published on

ಮೈಸೂರು: ಮೈಸೂರು ರಾಜಮನೆತದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಸದ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಯದುವೀರ್ ಅವರನ್ನು ಶ್ಲಾಘಿಸುವ ಧಾಟಿಯಲ್ಲಿ ಮಾತನಾಡಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದರು.

ಮೈಸೂರು ರಾಜಮನೆತದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದರೆ ಸ್ವಾಗತಿಸುತ್ತೇನೆ. ಪಕ್ಷದ ಕಾರ್ಯಕರ್ತನಾಗಿ ಅವರ ಪರವಾಗಿ ಕೆಲಸ ಮಾಡುತ್ತೇನೆ. ಅರಮನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ರಾಜನಾಗಿ ಆರಾಮಾಗಿ ಇರುವ ಬದಲು ನಾನು ಸಹ ಪ್ರಜೆಗಳ ರೀತಿಯಲ್ಲಿ ಬದುಕುತ್ತೇನೆ ಎಂದು ಅವರು ತೀರ್ಮಾನಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಅರಮನೆಯಲ್ಲಿ ಆರಾಮಾಗಿದ್ದ ಯದುವೀರ್ ಬಿಜೆಪಿಯ ಕಾರ್ಯಕರ್ತನಾಗಿ ರೈತ ಹಾಗೂ ಜನವಿರೋಧಿಯಾಗಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದೊಡ್ಡಗಡಿಯಾರ ಬಳಿ ಕುಳಿತು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ ಅಂದರೆ, ಅವರಿಗೆ ಅರಮನೆ ವೈಭೋಗಕ್ಕಿಂತ ಜನರ ಸೇವೆ ಮುಖ್ಯವಾಗಿದೆ. ಹೀಗಾಗಿ ಅವರನ್ನು ಶ್ಲಾಘಿಸಬೇಕಾಗಿದೆ. ಪಕ್ಷದ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ವೇದಿಕೆ ಮೇಲೆ ಕೂರುತ್ತಾರೆ, ನಾವು ಕೆಳಗೆ ಕೂತಿರುತ್ತೇವೆ, ಮಹಾರಾಜರು ಸಹ ಕೆಳಗ್ಗೆ ಕೂರಲೂ ತಯಾರಾಗಿ ದ್ದಾರೆ. ಅದೇ ರೀತಿ ಪಕ್ಷದ ರಾಜ್ಯಾಧ್ಯಕ್ಷರು ನಗರಕ್ಕೆ ಆಗಮಿಸುವ ಸಂದರ್ಭ ಬಿಸಿಲಲ್ಲಿ ನಿಂತು ಬೊಕ್ಕೆ ಹಿಡಿದುಕೊಂಡು ಕಾಯುತ್ತಾ ನಿಂತಿರುತ್ತೇವೆ, ಮಹಾರಾಜರು ಆ ರೀತಿ ಕಾಯಲು ಸಹ ಸಿದ್ಧರಾಗಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಚಿವರು ಬಂದಾಗ ಬೊಕ್ಕೆ ನೀಡಿ ಕಾಲಿಗೆ ನಮಸ್ಕರಿಸಿ ಬರುತ್ತೇವೆ. ಈ ಕಾರ್ಯವನ್ನು ಸಹ ಮಾಡಲು ಯದುವೀರ್ ಸಿದ್ಧರಾಗಿದ್ದಾರೆ. ಇಷ್ಟೆಲ್ಲ ಮಾಡಲು ಸಿದ್ಧರಾಗಿರುವಾಗಿರು ವುದು ಖುಷಿ ಕೊಡುವ ವಿಚಾರವಲ್ಲವೇ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net