ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ

Pratap Simha gave a tong to Siddaramaiah
Published on

ಮಡಿಕೇರಿ:

ಸಿಎಂ ಸಿದ್ದರಾಮಯ್ಯ ಕಳೆದ ವಾರ ಕೊಡಗಿಗೆ ಬಂದಿದ್ದು ಕೊಡಗಿನ ಜನರಿಗೆ ಟೋಪಿ ಹಾಕಲು ವಿನಃ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಲು ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

7 ತಿಂಗಳಲ್ಲಿ ಸಿದ್ದರಾಮಯ್ಯ ಕಡೆದು ಕಟ್ಟಿ ಹಾಕಿದ್ದು ಏನೂ ಇಲ್ಲ. ಕಾಂಗ್ರೆಸ್ ಸರ್ಕಾರದಿಂದ ಕೊಡಗಿನ ಎಂಎಲ್‌ಎಗಳು 7 ತಿಂಗಳಲ್ಲಿ 7 ರೂ. ತಂದಿದ್ದರೆ ದಾಖಲೆ ಸಮೇತ ಪತ್ರಿಕಾ ಗೋಷ್ಠಿ ಮಾಡಲಿ ಎಂದು ಸವಾಲು ಹಾಕಿದ ಅವರು ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆ ಹೆಸರಿನಲ್ಲಿ ಸಿಎಂ ಕೊಡಗು ಭೇಟಿಯಿಂದ ಅದ್ಭುತ ಭಾಷಣ ಮಾತ್ರ ಮೂಡಿಬಂತು.


ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಲ್ಲಿ ಒಂದು ರೂಪಾಯಿ ಕೂಡ ಅವರು ಕೊಟ್ಟಿಲ್ಲ. ಅದು ಎಲ್ಲವೂ ಹಿಂದಿನ ಶಾಸಕರಾದ ಬೋಪಯ್ಯ ಮತ್ತು ರಂಜನ್ ಜಿಲ್ಲೆಗೆ ಕೊಟ್ಟಿರುವ ಕೊಡುಗೆಯಾಗಿದೆ. ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆಯಲ್ಲಿ ಕುಡಿಯುವ ನೀರಿನ ಸಂಪರ್ಕ ಉತ್ತಮ ಪಡಿಸುವ ಅಮೃತ್ ಯೋಜನೆಗೆ ಅನುದಾನ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇದರ ಕಾಮಗಾರಿಗೆ ಸಂಬAಧಿಸಿದ ಟೆಂಡರ್ ಓಪನ್ ಆಗುವ ಮೊದಲೇ ಸಿದ್ದರಾಮಯ್ಯ ಗುದ್ದಲಿಪೂಜೆ ಮಾಡಿದ್ದಾರೆ. ಸಂಸದರು ಕೇಂದ್ರದಿAದ ಬರ ಪರಿಹಾರ ಬಿಡುಗಡೆ ಮಾಡಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಮನಮೋಹನ್ ಸಿಂಗ್ ಸರ್ಕಾರಕ್ಕಿಂತ 11ಪಟ್ಟು ಹೆಚ್ಚು ಪರಿಹಾರ ಈಗಿನ ಕೇಂದ್ರ ಸರ್ಕಾರದಿಂದ ಕೊಡಲಾಗಿದೆ. ಬರ ಅಥವಾ ನೆರೆಪರಿಹಾರಕ್ಕೆ ಕೇಂದ್ರಸರ್ಕಾರಕ್ಕೆ ಅದರದ್ದೇ ಆದ ಮಾರ್ಗ ಸೂಚಿ ಇದ್ದು ನಿಗದಿತ ಪ್ರಕ್ರಿಯೆಗಳು ಮುಗಿದ ನಂತರ ಬಿಡುಗಡೆ ಆಗಲಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ಬಂದೇ ಬರುತ್ತದೆ. ಅದಕ್ಕೂ ಮೊದಲು ರಾಜ್ಯ ಸರ್ಕಾರ ಪರಿಹಾರ ಕೊಡಲಿ. ಇದು ಬಿಟ್ಟು ಕೊಡಗಿಗೆ ಬಂದು ಖಾಲಿ ಡಬ್ಬ ಅಲ್ಲಾಡಿಸುವ ಅಗತ್ಯ ಇಲ್ಲ ಎಂದು ಭಾನುವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ಪೊನ್ನಣ್ಣ ಅವರು 7 ತಿಂಗಳಲ್ಲಿ 7 ಅಡಿ ಕೂಡ ಡಾಮರು ಹಾಕಿಸಿಲ್ಲ. ಈ ವಿಷಯದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾದರಿಯಾಗಿದ್ದು, ತಮ್ಮದಲ್ಲದ ಯೋಜನೆಗಳ ಕ್ರೆಡಿಟ್ ತೆಗೆದುಕೊಳ್ಳುತ್ತಿಲ್ಲ. ಪೊನ್ನಣ್ಣ ರಾಜಕೀಯ ಶಿಸ್ತು ರೂಢಿಸಿಕೊಳ್ಳಲಿ. ಇದನ್ನು ಮಂತರ್ ಗೌಡ ಅವರನ್ನು ನೋಡಿ ಕಲಿಯಲಿ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾಯಕಾರಿ ರಸ್ತೆಗಳನ್ನು ಅಭಿವೃದ್ದಿಪಡಿಸಲು ರೂಪಿಸಲಾದ 8 ಕೋಟಿ ರೂ. ಮೊತ್ತದ ಯೋಜನೆ ತಂದಿರುವುದು ಕೆ.ಜಿ. ಬೋಪಯ್ಯ. ಆದರೆ ಶಾಸಕ ಪೊನ್ನಣ್ಣ ಇದು ತಾವು ತಂದಿರುವ ಅನುದಾನ ಎಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಶಾಸಕರು ಯಾವಾಗಲೂ ಕೇಂದ್ರ ಸ್ಥಾನದಲ್ಲಿ ಇರಬೇಕು. ಇದರ ಬದಲು ತಮ್ಮ ಪರವಾಗಿ ದೂತನನ್ನು ಕಳುಹಿಸುವುದು ಜನ ಒಪ್ಪುವುದಿಲ್ಲ ಎಂದು ಪೊನ್ನಣ್ಣ ಅವರ ಕಾಲೆಳೆದರು.

ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಸಿದ್ದರಾಮಯ್ಯ ಉದ್ಘಾಟನೆಗಳ ಭಾಗ್ಯವಂತ. ಹಿಂದಿನ ಸರ್ಕಾರಗಳ ಯೋಜನೆಗಳನ್ನು ಅಭಿವೃದ್ಧಿ ಮಾಡುವುದೇ ಅವರ ಕೆಲಸ. ಅವರು ಉದ್ಘಾಟಿಸಿದ ಎಸ್‌ಪಿ ಕಚೇರಿ ಬರೀ 7 ತಿಂಗಳಲ್ಲಿ ಆಯಿತಾ ? ನೈತಿಕತೆ ಇದ್ದರೆ ಎಸ್‌ಪಿ ಕಚೇರಿ ಉದ್ಘಾಟನೆ ಮಾಡಬಾರದಿತ್ತು. ಶಾಸಕರು ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂದು ಕೇಲುವುದಕ್ಕೂ ಮೊದಲು ನೀವು ಏನು ಕೊಟ್ಟಿದ್ದೀರಿ ಎನ್ನುವುದು ಹೇಳಿ. ಚುನಾವಣೆಗೋಸ್ಕರ ವ್ಯಯಕ್ತಿಕ ಟೀಕೆ, ಏಕವಚನ ಪ್ರಯೋಗ ಸರಿಯಲ್ಲ. ಅದು ನಮಗೂ ಬರುತ್ತದೆ, ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ ಎಂದರು.
ಮಾಧ್ಯಮ ಪ್ರಮುಖ್ ಸುಬ್ರಹ್ಮಣ್ಯ ಉಪಧ್ಯಾಯ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರ ಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪಕ್ಷದ ಮುಖಂಡ ರವೀಂದ್ರ ಮಾಚಿಮಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net