ಕೆ.ಆರ್. ಪ್ರಸಿನ್ ಗೌಡ ಅವರ 'ಮನ ಮಾತಾದಾಗ' ಬಿಡುಗಡೆ

27mdk02
Published on

ಮಡಿಕೇರಿ:

ಶಿಕ್ಷಣ ಎಲ್ಲವನ್ನೂ ಲೆಕ್ಕಾಚಾರಲ್ಲಿ ನೋಡುವುದನ್ನು ಕಲಿಸುವಂತೆ ಇರಬಾರದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅಭಿಪ್ರಾಯಪಟ್ಟರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಏರ್ಪಸಲಾಗಿದ್ದ ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಕೆ.ಆರ್. ಪ್ರಸಿನ್ ಗೌಡ ಅವರ ’ಮನ ಮಾತಾದಾಗ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಮಕ್ಕಳು ಓದಬೇಕಾಗಿದ್ದನ್ನು ಕೊಡುವುದರ ಬದಲು ನಾವು ಓದಬೇಕಾಗಿದ್ದನ್ನು ಕೊಡುವ ಕೆಲಸ ಇಂದು ಆಗುತ್ತಿದೆ. ಮಗುವಿನ ಭಾವಕೋಶ ಬೆಳೆಸದೆ ಬುದ್ಧಿಕೋಶ ಬೆಳೆಸಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಚಾರಧಾರೆ ಮಕ್ಕಳಲ್ಲಿ ತುಂಬುವ ಕೆಲಸ ಆಗಬೇಕು. ಒಬ್ಬ ಬರಹಗಾರನಿಗೆ ಇರುವ ಬದ್ಧತೆ ಎಲ್ಲಾ ಹಂತದಲ್ಲೂ ಒಂದೇ ರೀತಿಯಲ್ಲಿ ಇರಬೇಕು. ಆತನ ಬರವಣಿಗೆ ಸಮಾಜಕ್ಕೆ ಹಿತವಾಗಿರಬೇಕು. ಈ ವಿಷಯ ಬರಹಗಾರ ತನ್ನ ಮೊದಲ ಹೆಜ್ಜೆಯಲ್ಲೇ ಮೂಡಿಸಬೇಕು. ಬರಹಗಾರ ತಾನೂ ಬೆಳೆಯುವುದಲ್ಲದೆ ಓದುಗರನ್ನೂ ಬೆಳೆಸಬೇಕು. ಸುದೀರ್ಘ ಬದುಕಿನಲ್ಲಿ ಕಷ್ಟ ಅಥವಾ ಸುಖ ಶಾಶ್ವತವಲ್ಲ ಎಂಬುದು ಅರಿತುಕೊಳ್ಳಬೇಕು. ಸ್ನೇಹ ಸಂಬಂಧ ರಕ್ತ ಸಂಬಂಧಕ್ಕಿಂತ ಮಿಗಿಲು ಎಂದರು.

ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಪುಸ್ತಕಗಳನ್ನು ಕೊಡುಗೆಯಾಗಿ ಕೊಡುವ ಪದ್ಧತಿ ರೂಢಿ ಆಗಬೇಕು. ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸಬೇಕು. ಓದುವ ಅಭ್ಯಾಸ ಅಳವಡಿಸಿಕೊಳ್ಳುವುದರಿಂದ ಬದುಕು ಪರಿಪೂರ್ಣ ಆಗುತ್ತದೆ. ಪುಸ್ತಕಗಳಿಗೆ ಇರುವ ಮಹತ್ವವನ್ನು ಮಕ್ಕಳಲ್ಲಿ ಎಳೆವೆಯಲ್ಲೇ ಹೇಳಿಕೊಡಬೇಕು. ಓದುವುದರಿಂದ ಮಗುವಿನಿಂದ ಹಿರಿಯರ ತನಕ ಸಾಕಷ್ಟು ಪ್ರಯೋಜನ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ಇರುವವರು ಕ್ರಿಯಾಶೀಲ ಮತ್ತು ಸೃಜನಾತ್ಮಕರಾಗಿ ಇರಬೇಕಾದರೆ ಪುಸ್ತಕ ಓದಲೇಬೇಕು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವುದರಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಪುಸ್ತಕಗಳು ಜೀವನದ ಅವಿಭಾಜ್ಯ ಅಂಗ ಆಗಬೇಕು. ಪುಸ್ತಕಗಳೇ ಉತ್ತಮ ಗೆಳೆಯರಾಗಿದ್ದು ಎಲ್ಲ ಮನೆಯಲ್ಲೂ ಪುಸ್ತಕ ಇಡಲು ವಿಶೇಷ ಜಾಗ ಕೊಡುವಂತಾಗಬೇಕು. ಕೊಡಗು ಜಿಲ್ಲೆಯ ಶಾಲೆಗಳಲ್ಲಿ ಓದುವ ಅಭ್ಯಾಸ ಹೆಚ್ಚಿಸುವ ಕೆಲಸ ಆಗಬೇಕು ಎಂದರು.

ವಿಕ್ರಮ ಸಂಪಾದಕ ವೃಷಾಂಕ್ ಭಟ್ ಮಾತನಾಡಿ ದೇಶದ ವಿಷಯ ಬಂದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ ಹೆಚ್ಚು. ಇನ್ನೊಬ್ಬರಿಗೋಸ್ಕರ ಬದುಕಬೇಕು ಎನ್ನುವ ಸಹಜ ಗುಣ ದೇಶಕ್ಕಾಗಿ ಬದುಕಬೇಕು ಎನ್ನುವಂತೆ ಇರಬೇಕು ಎಂದು ಆಭಿಪ್ರಾಯಪಟ್ಟರು.

ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ, ’ಮನ ಮಾತಾದಾಗ’ ಕೃತಿಯ ಲೇಖಕ ಕೆ.ಆರ್. ಪ್ರಸಿನ್ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net