ಜಿಲ್ಲೆಯ ಸಾಹಿತ್ಯ ಭಾರತಕ್ಕೆ ಮಾದರಿ: ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ ಅಭಿಮತ

1 (3)
Published on

ಮಂಡ್ಯ: ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿ ಮಂಡ್ಯಕ್ಕೆ ತನ್ನದೇ ಆದ ಹಿರಿಮೆ ಇದೆ. ಅದರಲ್ಲೂ ಜಿಲ್ಲೆಯ ಸಾಹಿತ್ಯ ಪರಂಪರೆ ಭಾರತಕ್ಕೆ ಮಾದರಿ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಿದ್ದಲಿಂಗಪ್ಪ ಬನ್ನಂಗಾಡಿ ಅಭಿಪ್ರಾಯಪಟ್ಟರು.

ನಗರದ ಡ್ಯಾಫೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕಾಯಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಹಿತಿಗಳಾದ ಸುಜನಾ, ಪುತಿನ, ಎ.ಎನ್.ಮೂರ್ತಿರಾವ್, ಎಚ್.ಎಲ್.ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರ ಸಾಹಿತ್ಯ ಅನನ್ಯವಾದುದು. ಇವರು ನಮ್ಮೆಲ್ಲರ ನೆನಪಿಗೆ ಬರುತ್ತಾರೆ. ಆದರೆ ರಾಜಕಾರಣಿಗಳು, ಶ್ರೀಮಂತರನ್ನು ಯಾರೂ ನೆನೆಸಿಕೊಳ್ಳುವುದಿಲ್ಲ. ಇಂತಹ ನೆಲದಲ್ಲಿ ಇತ್ತೀಚೆಗೆ ಸಾಹಿತ್ಯ ರಚನೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕೊರತೆಯ ನಡುವೆ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರು 450 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಆಟ ಮತ್ತು ಪಾಠದ ಜತೆಗೆ ಪುಸ್ತಕಗಳನ್ನು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಚೆನ್ನಾಗಿ ಅಧ್ಯಯನ ಮಾಡಿ ಜಿಲ್ಲೆಗೆ, ಶಾಲೆಗೆ, ಪಾಲಕರಿಗೆ ಹೆಸರು ತರಬೇಕು ಎಂದು ಕರೆ ನೀಡಿದರು.

ಕವಯತ್ರಿ ಡಾ.ಎಚ್.ಆರ್.ಕನ್ನಿಕಾ ರಚಿಸಿರುವ ಅರವತ್ತಾರಕ್ಕಾರತಿ ಕೃತಿ ಲೋಕಾರ್ಪಣೆ ಮಾಡಿದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ವಿ.ಎಸ್.ಶ್ರೀದೇವಿ ಮಾತನಾಡಿ, ಕನ್ನಿಕಾ ಅವರು ತಮ್ಮ ಉದ್ಯೋಗ, ಅಧ್ಯಾಪನ, ಅಧ್ಯಯನದ ನಡುವೆ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡಿದ್ದಾರೆ. ಹೆಬ್ರಿ ಅವರ 66 ಕೃತಿಗಳನ್ನು ಅಧ್ಯಯನ ಮಾಡಿ ಅದರ ಸಾರವನ್ನು ಕೈಪಿಡಿಯ ರೂಪದಲ್ಲಿ ಒದಗಿಸಿರುವುದಕ್ಕೆ ಶ್ಲಾಘನೀಯ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆ ಜತೆಗೆ ವೈಚಾರಿಕತೆ ಬೆಳೆಸಿಕೊಳ್ಳಬಹುದು. ಪುಸ್ತಕ ಓದುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಭಾಷಾಜ್ಞಾನ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಸಾಹಿತಿ ಡಾ.ಪ್ರದೀಪ್‌ಕುಮಾರ ಹೆಬ್ರಿ ಅವರಿಗೆ ವಿ.ಎಲ್.ಎನ್ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕಿ ಸುಜಾತಾಕೃಷ್ಣ ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ವಹಿಸಿದ್ದರು. ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರಾಜಶೇಖರ್, ಪ್ರತಿಭೆ ವೇದಿಕೆ ಅಧ್ಯಕ್ಷ ಎಸ್.ರಾಜರತ್ನಂ, ಮುಖ್ಯ ಶಿಕ್ಷಕಿ ಚೈತ್ರಾ, ಮಾಧುರಿ, ಅಶ್ವಿನಿ ಇತರರಿದ್ದರು.

ಇದೇ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಡ್ಯಾಫೋಡಿಲ್ಸ್ ಶಾಲೆಯ ವಿದ್ಯಾರ್ಥಿ ಶರಣ ಐತಾಳ್ ಎಂಬುವರನ್ನು ಸನ್ಮಾನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡ್ಯಾಫೋಡಿಲ್ಸ್ ಶಾಲೆ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net