

ಮಂಡ್ಯ: ದೇಶದಲ್ಲಿ ಆಹಾರ, ಹಣ್ಣು, ಹಾಲಿನ ಉತ್ಪಾದನೆ ಹೆಚ್ಚಾದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ಕಾರಣ ಎಲ್ಲ ಬೆಳೆಗಳನ್ನು ಸಮೃದ್ಧಿಯಾಗಿ ಬೆಳೆದರೂ ಸೂಕ್ತ ಮಾರುಕಟ್ಟೆ ಮೌಲ್ಯ, ಶ್ರಮಕ್ಕೆ ತಕ್ಕ ಪ್ರತಿಫಲದ ದರ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಆದ್ಯ ಗಮನ ನೀಡುತ್ತಿಲ್ಲ. ಹೀಗಾಗಿಯೇ ಮಲೆನಾಡು ಸೇರಿದಂತೆ ರಾಜ್ಯದಲ್ಲಿ ರೈತನ ಮಕ್ಕಳಿಗೆ ರೈತನೇ ಹೆಣ್ಣು ಕೊಡದ ಸ್ಥಿತಿ ಬಂದೊದಗಿದೆ. ಇದು ತಮಾಷೆಯ ಸಂಗತಿಯಲ್ಲ. ಬದಲಿಗೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವ ಜನರು ಗೌರವಯುತವಾದ, ಲಾಭದಾಯಕವಾದ ವ್ಯವಸಾಯ ಮಾಡಲು ಮುಂದಾಗದಿದ್ದರೆ ಸಾಮಾಜಿಕ ಸ್ಥಿತಿ ಅಧೋಗತಿಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಯೋಜನೆಗಳು ಸರಿಯಾದ ಪರಿಣಾಮ ಬೀರಿದ್ದರೆ ಅದರ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಗ್ರಾಮೀಣ ಪ್ರದೇಶಗಳ ಯುವಜನರು ಉದ್ಯೋಗ ಹರಸಿ ಪಟ್ಟಣ ಸೇರಿಕೊಂಡಿದ್ದಾರೆ. ಪರಿಣಾಮ ಗ್ರಾಮಗಳು ವೃದ್ಧಾಶ್ರಮದಂತಾಗಿವೆ. ಇದು ಹೀಗೆಯೇ ಮುಂದುವರೆದರೆ ಸಮಸ್ಯೆ ಬಿಗಡಾಯಿಸುತ್ತದೆ ಎಂಬ ಜಾಗೃತಿ ಮೂಡಿಸಬೇಕಾಗಿದೆ. ಹಸಿರು ಕ್ರಾಂತಿಯಾದ ಬಳಿಕ ಬೆಳೆ ಹೆಚ್ಚಾಗಿ ಉತ್ಪಾದನಾ ಕೇಂದ್ರಿತವಾಯಿತೇ ಹೊರತು ಕೃಷಿಯು ರೈತ ಕೇಂದ್ರಿತವಾಗಲಿಲ್ಲ ಎಂದು ವಿಷಾಧಿಸಿದರು.
ಇಂದು ರಾಜಕೀಯ ಪಕ್ಷಗಳು ಅಹಿಂದ, ಒಕ್ಕಲಿಗ, ವೀರಶೈವ, ಬ್ರಾಹ್ಮಣ ಎಂದು ವರ್ಗೀಕರಿಸುತ್ತವೆ. ಆದರೆ ರೈತನಾದವನಿಗೆ ಯಾವ ಜಾತಿ. ಒಕ್ಕಲುತನ ಮಾಡುವಾತನೇ ರೈತ ಎಂಬ ಅರಿವು ಏಕಿಲ್ಲ. ಆದ್ದರಿಂದ ರೈತನನ್ನು ನೋಡಿ, ಆತನ ಜಾತಿ ಯಾವುದೆಂಬುದನ್ನು ನೋಡಬೇಡಿ ಎಂದ ಅವರು, ಟೊಮೋಟೋ ಬೆಳೆದು ಮಾರುಕಟ್ಟೆಯಲ್ಲಿ ಮಧ್ಯವರ್ತಿಯ ಮುಂದೆ ನಿಂತು ಅವ ಹೇಳುವ ದರಕ್ಕೆ ಮಾರಾಟ ಮಾಡುವುದನ್ನು ಬಿಟ್ಟು, ರೈತ ಉತ್ಪಾದನಾ ಕೇಂದ್ರ ಮಾಡಿಕೊಂಡು ಮಧ್ಯವರ್ತಿ ಅಥವಾ ಗ್ರಾಹಕನಾಗಲಿ ನಿಮ್ಮ ಮುಂದೆ ಬರುವಂತೆ ಮಾಡಿ. ಆಗ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಕೃಷಿ ವಲಯಕ್ಕೆ ಸಹಕಾರಿ ಸಿದ್ಧಾಂತವೇ ಮೋಕ್ಷದಾಯಕವಾದುದು. ಹಾಗಾಗಿ ರೈತರಲ್ಲಿ ಒಗ್ಗಟ್ಟಿನ ಮನೋಧರ್ಮ ಅಗತ್ಯ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸಂಘದ ಕಾನೂನು ಸಲಹೆಗಾರ ಎ.ಇಮ್ಮಾನ್ಯೂಯಲ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಯರಾಂ ಕೋಣನಹಳ್ಳಿ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಾಜಿ ಸಚಿವ ವೈ.ಕೆ.ರಾಮಯ್ಯ ಅವರ ಮಗಳು ವೈ.ಆರ್.ಚೇತನಾ, ಜಯಶ್ರೀ, ಲೋಕೇಶ್ ಚಂದಗಾಲು, ಎಂ.ಕೆ.ಹರೀಶ್‌ಕುಮಾರ್ ಉಪಸ್ಥಿತರಿದ್ದರು.
ಕರ್ನಾಟಕ ಸಂಘದಿಂದ ಕೊಡಮಾಡುವ ಪ್ರತಿಷ್ಠಿತ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮಂಚೇಗೌಡನದೊಡ್ಡಿ ಗ್ರಾಮದವರೂ ಆದ ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ಕೃಷಿ ಪ್ರಶಸ್ತಿ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ದೇವೇಗೌಡನದೊಡ್ಡಿಯ ಪ್ರಗತಿಪರ ಕೃಷಿಕ ದೇವಯ್ಯ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿಗೆ ಮದ್ದೂರು ತಾಲೂಕಿಗೆ ಗೆಜ್ಜಲಗೆರೆಯ ಹಿರಿಯ ಸಹಕಾರಿ ಜಿ.ಟಿ.ಪುಟ್ಟಸ್ವಾಮಿ ಅವರಿಗೆ ಡಾ.ಪ್ರಕಾಶ್ ಕಮ್ಮರಡಿ ಪ್ರದಾನ ಮಾಡಿದರು. ಮೂವರಿಗೆ ತಲಾ 10 ಸಾವಿರ ರೂ ನಗದು ನೀಡಲಾಯಿತು.