ಹಬ್ಬ, ಆಚರಣೆ, ಸಂಬಂಧಗಳು ಉಳಿಯಲಿ: ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಹೇಳಿಕೆ

Prasasthi Pradana)
Published on

ಮಂಡ್ಯ: ಹಲವು ಮಹತ್ವದ ವಿಷಯವನ್ನು ಏಕಕಾಲದಲ್ಲಿ ಎಲ್ಲರಿಗೂ ದೃಶ್ಯ ಮಾಧ್ಯಮದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಬಹುದು. ಅದು ಅತ್ಯಂತ ಪ್ರಭಾವಿಶಾಲಿ ಮಾಧ್ಯಮ ಎಂದು ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸಿ.ನಾಗರಾಜು- ಗುಣಸಾಗರಿ ಸಿ ನಾಗರಾಜು ಜಾನಪದ ಕಲಾ ಪ್ರಶಸ್ತಿ ಹಾಗೂ ಚೆನ್ನಮ್ಮ ಕರಿಯಪ್ಪ ಜಾನಪದ ಕಲಾಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹಬ್ಬ ಹರಿದಿನ, ಆಚರಣೆ, ಸಂಬಂಧಗಳು ಉಳಿಯಬೇಕು. ಆದರೆ ಅವುಗಳು ದುರಂತದ ಛಾಯೆಗಳಾಗುತ್ತಿವೆ. ಅವುಗಳನ್ನು ಪುಸ್ತಕ ಹಾಗೂ ಸಿನಿಮಾಗಳಲ್ಲಾದರೂ ಹಿಡಿದಿಡುವ ಕೆಲಸ ಮಾಡಬೇಕು. ಅವುಗಳು ಮುಂದಿನ ಪೀಳಿಗೆಗೆ ಅವಶ್ಯಕ ಎಂದರು.

ದೃಶ್ಯ ಮಾಧ್ಯಮದ ಮೇಲಿನ ನಂಬಿಕೆಯಿಂದ, ನಾನು ಸಾಮಾಜಿಕ ಜವಾಬ್ದಾರಿ ಹೊತ್ತು ’ಸಂಕ್ರಾಂತಿ’ ಚಿತ್ರದಿಂದ ಹಿಡಿದು, ’ಹೆಬ್ಬೆಟ್ಟು ರಾಮಕ್ಕ’ ಸೇರಿದಂತೆ ಇತ್ತೀಚಿನ ’ಕಾಸಿನಸರ’ ಚಿತ್ರದವರೆಗೆ ಚಿತ್ರ ನಿರ್ಮಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದೇನೆ. ನನಗೆ ಮಕ್ಕಳ ಚಿತ್ರಗಳ ಬಗ್ಗೆ ಒಲವು ಹೆಚ್ಚು. ಹೀಗಾಗಿ ’ಚುಕ್ಕಿ ಚಂದ್ರಮ’, ’ನಾನು ಗಾಂಧಿ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದೇನೆ. ಮಕ್ಕಳು ಮುಂದಿನ ಜನಾಂಗ. ಮಕ್ಕಳನ್ನು ಸರಿ ಮಾಡಿದರೆ ಇಡೀ ಸಮಾಜ, ದೇಶ ಸರಿಯಾಗುತ್ತದೆ. ಮೊದಲು ಅವರನ್ನು ಸರಿಪಡಿಸಬೇಕು. ಅವರಿಗೆ ಸರಿಯಾದ ಶಿಕ್ಷಣ, ಜ್ಞಾನಾರ್ಜನೆ ಕಲೆಯನ್ನು ಕೊಡಬೇಕು ಎಂದರು.

ನಿತ್ಯಸಚಿವ ಕೆ.ವಿ.ಶಂಕರಗೌಡ ಮತ್ತು ಸಚ್ಚಿದಾನಂದ ಅವರು ಚಿತ್ರ ನಿರ್ಮಾಣಕ್ಕೆ ಅವಕಾಶಕೊಟ್ಟು ನಂಬಿಕೆಯಿಟ್ಟು ನನ್ನನ್ನು ಹುರಿದುಂಬಿಸಿದವರು. ಇಂದಿಗೂ ಆ ಕುಟುಂಬದ ಜತೆ ಒಡನಾಟ ಉಳಿಸಿಕೊಂಡು ಬಂದಿದ್ದೇನೆ. ಕೇವಲ ಸಿನಿಮಾ ಸಂಬಂಧ ಮಾತ್ರವಲ್ಲ. ಇಲ್ಲಿನ ರೈತ ಸಂಘ ಕಟ್ಟಿ ಬೆಳೆೆಸಿದವರು ನಾವು. ಪುಟ್ಟಣ್ಣಯ್ಯ, ಎಸ್.ಡಿ.ಜಯರಾಂ, ಎಂ.ಶ್ರೀನಿವಾಸ್, ಕೆ.ಬೋರಯ್ಯ ಅವರೆಲ್ಲರ ಒಡನಾಟ ಗಾಢವಾಗಿದೆ ಎಂದು ನೆನಪಿಸಿಕೊಂಡ ಅವರು, ಜಾನಪದ ಕಲೆಗಳಲ್ಲಿ ಮಂಡ್ಯ ಸಂಪದ್ಭರಿತ. ಇಲ್ಲಿನ ಒಂದೊಂದು ಊರಿನಲ್ಲಿ ಒಂದೊಂದು ಕಲೆ ಇದೆ. ಗಾದೆಗಳು ಕೂಡ ಒಂದು ಜಾನಪದ ಸಂಪತ್ತು ಎಂದರು.

ಚೆನ್ನಮ್ಮ ಕರಿಯಪ್ಪ ಜಾನಪದ ಕಲಾಪ್ರಶಸ್ತಿ ದಾನಿ ಪ್ರೊ.ನರಸಿಂಹೇಗೌಡ ನಾರಣಾಪುರ ಮಾತನಾಡಿ, ಮಂಡ್ಯ ಜಾನಪದ ಸಾಹಿತ್ಯ ಸಂಸ್ಕೃತಿಯಲ್ಲಿ ಖ್ಯಾತಿ ಪಡೆದಿದೆ. ಕರಾವಳಿಯ ಜನ ಯಕ್ಷಗಾನವನ್ನು ಒಪ್ಪಿ ಅಪ್ಪಿಕೊಂಡಂತೆ ನಮ್ಮಲ್ಲಿ ಇರುವ ಭಾಗವತಿಕೆ, ಮೂಡಲಪಾಯ ಯಕ್ಷಗಾನ, ಪಟ-ಪೂಜಾ ಕುಣಿತ, ಸೋಬಾನೆ ಪದ ಮುಂತಾದ ವೈವಿಧ್ಯಮಯ ಪ್ರಕಾರಗಳು ಚಾಲ್ತಿಯಲ್ಲಿದ್ದರೂ ಹೆಚ್ಚು ಪ್ರಚಲಿತತೆಗೆ ತರಲು ಸಾಧ್ಯವಾಗುತ್ತಿಲ್ಲ. ವಿದೇಶಿಯರು ನಮ್ಮ ಕಲೆಗಳನ್ನು ಗುರುತಿಸಿದರೂ ನಾವು ಗುರುತಿಸುವ ಕೆಲಸ ಮಾಡುತ್ತಿಲ್ಲ. ನೆರೆಮನೆಯ ಹುಡುಗರನ್ನು ನೆಗೆದು ಮುದ್ದಿಸುವವರು ನಾವು. ನಮಗೆ ಹಿತ್ತಲ ಗಿಡ ಮದ್ದಲ್ಲ ಎಂದು ವಿಷಾದಿಸಿದರು.

ಅಭಿನಂದನಾ ಮಾತುಗಳನ್ನಾಡಿದ ಕರ್ನಾಟಕ ಸಂಘದ ಉಪಾಧ್ಯಕ್ಷ ಎಚ್.ಎಸ್.ಮುದ್ದೇಗೌಡ, ಯಾವುದೇ ವ್ಯಕ್ತಿ, ಪ್ರಶಸ್ತಿಯಿಂದ ದೊಡ್ಡವನಾಗುವುದಿಲ್ಲ. ಅಂತಹ ಪ್ರಶಸ್ತಿ ಆ ವ್ಯಕ್ತಿಯ ಪ್ರಾಥಮಿಕ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಅವರಿಂದ ಸಮಾಜ ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತದೆ.ಅದು ಹುಸಿಯಾಗದಂತೆ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಸಾಧಕ ಹಿರಿಯ ವ್ಯಕ್ತಿಗಳನ್ನು ಗುರುತಿಸಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು. ಕರ್ನಾಟಕ ಸಂಘದ ವತಿಯಿಂದ 17 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ ಎಂದರು.

ದತ್ತಿದಾನಿ ಎಸ್.ಸುದೀಪ್‌ಕುಮಾರ್, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಹರೀಶ್‌ಕುಮಾರ್, ಲೋಕೇಶ್ ಚಂದಗಾಲು, ಹನಕೆರೆ ನಾಗಪ್ಪ, ಡಾ.ಕೆಂಪಮ್ಮ ಕಾರ್ಕಹಳ್ಳಿ, ಅನಿತಾ ಮಂಗಲ, ದೇವಿಕಾ ಹಾಜರಿದ್ದರು.

ಪ್ರಶಸ್ತಿ ಪ್ರದಾನ: ಮಳವಳ್ಳಿ ತಾಲೂಕು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಕೆ.ಎಂ.ಬಸವರಾಜು ಅವರಿಗೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಪೂಜಾ ಕುಣಿತ ಕಲಾವಿದರಾದ ಕಾರಸವಾಡಿಯ ಕೆ.ಪಿ.ದೇವರಾಜು ಹಾಗೂ ಸವಿತಾ ಚೀರುಕುನ್ನಯ್ಯ ಅವರಿಗೆ ಸಿ.ನಾಗರಾಜು-ಗುಣಸಾಗರಿ ಸಿ.ನಾಗರಾಜು ಜಾನಪದ ಕಲಾ ಪ್ರಶಸ್ತಿ ಮತ್ತು ಕೆರೆತೊಣ್ಣೂರಿನ ಜಾನಪದ ಕಲಾವಿದೆ ಸರೋಜಮ್ಮ ಅವರಿಗೆ ಚೆನ್ನಮ್ಮ ಕರಿಯಪ್ಪ ಜಾನಪದ ಕಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net