

ಅರಕಲಗೂಡು: ತಾಲೂಕಿನ ರಾಮನಾಥಪುರದ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ತುಳು ಷಷ್ಠಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
ನಾಡಿನ ವಿವಿಧೆಡೆಯಿಂದ ಅಪಾರ ಭಕ್ತರು ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ದೇವಾಲಯದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಪೂರೈಸಿದ ಬಳಿಕ ದೇವರ ಉತ್ಸವಮೂರ್ತಿಯನ್ನು ಹೊರತಂದು ಪ್ರಾಂಗಣದ ಸುತ್ತ ಗೋವಿಂದ ಸ್ಮರಣೆ ಮೊಳಗಿಸುತ್ತ ಪ್ರದಕ್ಷಿಣೆ ಹಾಕಿಸಿ ರಥಾರೋಹಣ ಮಾಡಲಾಯಿತು. ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರ ಹರ್ಷೋದ್ಗಾರದ ನಡುವೆ ಮಧ್ಯಾಹ್ನ 12ಕ್ಕೆ ಅಭಿಜನ್ ಮುಹೂರ್ತದಲ್ಲಿ ತೇರು ಎಳೆಯಲು ಆರಂಭಿಸಿದರು.
ರಥ ಬೀದಿಯಲ್ಲಿ ಕಾವೇರಿ ಸೇತುವೆತನಕ ಸೂಸೂತ್ರವಾಗಿ ಸಾಗಿದ ತೇರು ಪುನಃ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಚಲಿಸುವಾಗ ಭಕ್ತರು ಜಯಘೋಷಗಳನ್ನು ಕೂಗುತ್ತ ತೇರಿನತ್ತ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು.
ಬೆಳಗಿನ ಜಾವದಿಂದಲೇ ಶ್ರೀಕ್ಷೇತ್ರದತ್ತ ಬರಲಾರಂಭಿಸಿದ ಭಕ್ತರ ದಂಡು ಕೊರೆಯುವ ಚಳಿಯನ್ನೂ ಲೆಕ್ಕಿಸಿದೆ ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ಹರಕೆ ಹೊತ್ತ ಭಕ್ತರು ಮುಡಿ ಮಾಡಿಸಿಕೊಂಡಿಸಿಕೊಂಡು ಕಾವೇರಿಯಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹಣ್ಣು-ತುಪ್ಪ ನೈವೇದ್ಯ ಅರ್ಪಿಸಿ ಪೂಜೆ ಮಾಡಿಸಿದರು. ದೇವಸ್ಥಾನದಲ್ಲಿ ನೂಕು-ನುಗ್ಗಲು ಉಂಟಾಗದಂತೆ ಭಕ್ತರು ಸಾಲಿನಲ್ಲಿ ಬರಲು ಅವಕಾಶ ಕಲ್ಪಿಸಲಾಗಿತ್ತು.