ಕೃಷಿ ಜೀವನಕ್ಕೆ ಮರಣ ಶಾಸನ ಬರೆದ ನೀರು ನಿರ್ವಹಣಾ ಪ್ರಾಧಿಕಾರ: ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಆಕ್ರೋಶ

1
Published on

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ನಿರ್ವಹಣಾ ಮಂಡಳಿ ಸೂಚನೆ ನೀಡುವ ಮೂಲಕ ರಾಜ್ಯದ ರೈತರ ಕೃಷಿ ಜೀವನಕ್ಕೆ ಮರಣ ಶಾಸನ ಬರೆದಿದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಅರಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀರು ನಿರ್ವಹಣಾ ಮಂಡಳಿಯ ನಿರ್ದೇಶನದಿಂದ ನಮ್ಮ ರಾಜ್ಯದ ಜನತೆಗೆ ಮರಣ ಶಾಸನದಂತಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದು ನಿಲ್ಲಿಸಿರುವ ಬೆಳೆಗಳಿಗೆ ಸಕಾಲಕ್ಕೆ ಮಳೆಯೂ ಬೀಳದ ಕಾರಣ ನೀರಿಲ್ಲದ ದುಸ್ಥಿತಿ ಒದಗಿ ಬಂದಿದೆ. ಈಗಾಗಲೇ ತ.ನಾಡಿಗೆ 13 ಟಿಎಂಸಿ ನೀರು ಹರಿದಿದೆ. ಈಗ ಮತ್ತೆ ಏಳು ಟಿಎಂಸಿ ನೀರನ್ನು ಪ್ರತಿ ದಿನ 5000 ಕ್ಯೂಸೆಕ್‌ನಂತೆ ಹರಿಯುವಂತೆ ನೀರು ನಿರ್ವಹಣಾ ಮಂಡಳಿಯ ನಡೆ ಏಕ ಸ್ವರೂಪದ್ದಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ತ.ನಾಡಿಗೆ ಇಷ್ಟು ಪ್ರಮಾಣದ ನೀರು ಹರಿದ ನಂತರ ನಮ್ಮ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತದೆ ಎಂಬ ಕನಿಷ್ಟ ಜ್ಞಾನವು ರಾಜ್ಯಸರ್ಕಾರಕ್ಕೆ ಇಲ್ಲದಿರುವುದು ವಿಪರ್ಯಾಸ. ನಿರ್ವಹಣಾ ಮಂಡಳಿಯ ನಡೆಯನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸುವ ಗೋಜಿಗೆ ಹೋಗದ ಸರ್ಕಾರವು ರೈತರಿಗಾಗಿ ಏನನ್ನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸರ್ಕಾರದ ನಡೆಯನ್ನು ಖಂಡಿಸಿ ಕೆಆರ್‌ಎಸ್ ಅಣೆಕಟ್ಟೆ ಬಳಿಯ ಬೃಂದಾವನ ಪ್ರವೇಶ ದ್ವಾರದಲ್ಲಿ ಅಹೋ ರಾತ್ರಿ ಧರಣಿಯನ್ನು ಆರಂಭಿಸಲಾಗಿದೆ. ಕೂಡಲೇ ತ.ನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸದಿದ್ದಲ್ಲಿ ಹೋರಾಟದ ರೂಪುರೇಷೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net