ಬಿಳಿಗಿರಿರಂಗನಬೆಟ್ಟ ದೇಗುಲದಲ್ಲಿ ಸಿಗದ ಪ್ರಸಾದ

27 yelandur 05
Published on

ಯಳಂದೂರು: ತಾಲೂಕಿನ ಐತಿಹಾಸಿಕ, ಪುರಾಣ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಪ್ರಸಾದ ಸಿಗದೆ ಭಕ್ತರು ನಿರಾಸೆಯಿಂದ ವಾಪಸ್ ಆಗಿದ್ದಾರೆ.

ಬಿಳಿಗಿರಿರಂಗನಬೆಟ್ಟದ ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಇಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದಿಂದ ಪ್ರಸಿದ್ಧಿ ಪಡೆದುಕೊಂಡಿದೆ. ಈ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಭಕ್ತರಿಗಾಗಿ ಮಧ್ಯಾಹ್ನ ಪ್ರಸಾದ ವ್ಯವಸ್ಥೆಯೂ ಇಲ್ಲಿದೆ. ಆದರೆ ಇದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಆಡಳಿತ ಮಂಡಳಿ ಸೋತಿದೆ

ಶ್ರಾವಣ ಮಾಸದಲ್ಲಿ ಶನಿವಾರ ಹಾಗೂ ಭಾನುವಾರ ಬೆಟ್ಟಕ್ಕೆ ಭೇಟಿ ನೀಡುವರ ಸಂಖ್ಯೆ ದುಪ್ಪಟ್ಟಾಗುತ್ತದೆ. ದೇಗುಲದ ಪಕ್ಕದಲ್ಲಿರುವ ಕಮರಿಯಲ್ಲಿ ದಾಸೋಹ ಭವನವೂ ಇದೆ. ಭಾನುವಾರ ಬೆಟ್ಟಕ್ಕೆ ಬಂದಿರುವ ಸಾವಿರಾರು ಭಕ್ತರು ಪ್ರಸಾದ ಸಿಗದೆ ವಾಪಸ್ ತೆರಳಿದ್ದಾರೆ. ಪ್ರತಿನಿತ್ಯ ಇಲ್ಲಿ ಮಧ್ಯಾಹ್ನ 12.30 ಕ್ಕೆ ಪ್ರಸಾದ ಆರಂಭಗೊಳ್ಳುತ್ತದೆ. ಭಾನುವಾರ ಇದು 2 ಗಂಟೆಗೆ ಮುಕ್ತಾಯವಾಗಿದೆ. ಪ್ರಸಾದ ವ್ಯವಸ್ಥೆ ಇದೆ ಎಂದು ಬಂದ ಭಕ್ತರಿಗೆ ನಿರಾಸೆಯಿಂದ ವಾಪಸ್ಸಾಗಿದ್ದಾರೆ.

ಶ್ರಾವಣ ಮಾಸವಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದರಿಂದ ಪ್ರಸಾದದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಗುಲದ ಆಡಳಿತ ಮಂಡಳಿ, ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ರಜೆ ದಿನ ಅಧಿಕಾರಿಗಳು ನಾಪತ್ತೆ: ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನ ಸೇರಿದಂತೆ ಶ್ರಾವಣ ಮಾಸದಲ್ಲಿ ಇಲ್ಲಿಗೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಆದರೆ ರಜೆ ದಿನಗಳಲ್ಲಿ ಇಲ್ಲಿ ಅಧಿಕಾರಿಗಳೇ ನಾಪತ್ತೆಯಾಗುತ್ತಾರೆ. ಅಲ್ಲದೆ ಇಲ್ಲಿ ಸೂಕ್ತ ಶೌಚಗೃಹವಿಲ್ಲ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ದೇಗುಲದ ಬಳಿ ತೆರಳು ವಾಹನಗಳ ಪಾರ್ಕಿಂಗ್ ಸ್ಥಳದಲ್ಲೂ ಪೊಲೀಸ್ ವ್ಯವಸ್ಥೆ ಇಲ್ಲದೆ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಬೆಟ್ಟದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net