ಪ್ರಸಾದ ಕೇಂದ್ರಗಳಿಗೆ ಪರವಾನಗಿ ಕಡ್ಡಾಯ - ಆಯುಕ್ತೆ ಮಂಜುಶ್ರೀ ಸೂಚನೆ

260220 Hosapate Food safety and quality training
Published on

ಹೊಸಪೇಟೆ: ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಲ್ಲಿ ನಡೆಸುವ ದಾಸೋಹಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಕಡ್ಡಾಯ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತೆ ಮಂಜುಶ್ರೀ ತಿಳಿಸಿದರು.

ನಗರದ ಶ್ರೀಕೊಟ್ಟೂರುಸ್ವಾಮಿ ಮಠದಲ್ಲಿ ಬೆಂಗಳೂರು ಆಯುಕ್ತಾಲಯ ಹಾಗೂ ಬಳ್ಳಾರಿ ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ಪ್ರಾಧಿಕಾರ ಬುಧವಾರ ಹಮ್ಮಿಕೊಂಡಿದ್ದ ನಿತ್ಯ ದಾಸೋಹ ದೇವಸ್ಥಾನಗಳ ಅಧಿಕಾರಿಗಳಿಗೆ ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಆಹಾರ ತಯಾರಿಕೆ ನೈರ್ಮಲ್ಯದಿಂದ ಕೂಡಿರಬೇಕು. ಪ್ರಸಾದ ತಯಾರಕರು ಮತ್ತು ದೇವಸ್ಥಾನದ ಟ್ರಸ್ಟಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಪ್ರಾಧಿಕಾರದಿಂದ ಪರವನಾಗಿ ಪಡೆದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ, ಕೊಪ್ಪಳ, ಗದಗ, ಕಲಬುರಗಿ ಜಿಲ್ಲೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಹಾಗೂ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳಿಗೆ, ಪವರ್ ಪ್ರಸೆಂಟೇಷನ್ ಮೂಲಕ ಅಡುಗೆ ಮನೆಯ ಸ್ವಚ್ಛತೆ ಮತ್ತು ಆಹಾರ ತಯಾರಿಕೆ ಕುರಿತು ಮಾರ್ಗದರ್ಶನ ನೀಡಲಾಯಿತು. ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿಗಳು, ದೇವಸ್ಥಾನ ನಿರ್ವಹಣೆಯ ಅಧಿಕಾರಿಗಳು ಇದ್ದರು.

ಗುಣಮಟ್ಟದ ಆಹಾರ ತಯಾರಿಸುವ ಧಾರ್ಮಿಕ ಕೇಂದ್ರಗಳಿಗೆ ಪ್ರಾಧಿಕಾರದಿಂದ ಭೋಗ್ ಪ್ರಮಾಣಪತ್ರ ನೀಡಲಾಗುವುದು. ಇದು ಅಲ್ಲಿಯ ಸ್ವಚ್ಛತೆ ಮತ್ತು ಗುಣಮಟ್ಟ ಪ್ರಮಾಣೀಕರಿಸಲಿದೆ. ಎಲ್ಲಿ ಭೋಗ್ ಪ್ರಮಾಣಪತ್ರ ಇರುತ್ತದೆಯೋ ಅಲ್ಲಿ ಶುದ್ಧ ಮತ್ತು ಆರೋಗ್ಯಕರ ಪ್ರಸಾದವಿರುತ್ತದೆ ಎಂಬ ಭಾವನೆ ಜನರಲ್ಲಿ ಬರಲಿದೆ. ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ ಸರ್ಕಾರದ ನಿಯಾಮಾನುಸಾರ ಕ್ರಮವಹಿಸಲಾಗುವುದು.| ಡಾ.ಲತಾ ಪ್ರಮೀಳಾ ಉಪ ಆಯುಕ್ತೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net