ಬದುಕಿನುದ್ದಕ್ಕೂ ಬಡವರ ಪರ ಧ್ವನಿಯಾಗಿದ್ದ ಪ್ರಸಾದ್

11
Published on

ಮೈಸೂರು:ತಮ್ಮ ಬದುಕಿನ ಉದ್ದಕ್ಕೂ ಬಡವರ ಪರ ಧ್ವನಿಯಾಗಿದ್ದ, ಸಾಮಾಜಿಕ ನ್ಯಾಯಕ್ಕೆೆ ಧಕ್ಕೆೆಯಾದಾಗ ಅದರ ವಿರುದ್ಧ ಸಿಡಿದೇಳುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮನುಷ್ಯರು ಹಾಗೇ ಬದುಕಬೇಕು ಎನ್ನುವುದನ್ನು ತಿಳಿಸುತ್ತಿದ್ದರು. ಆದ್ದರಿಂದ ಅವರ ವ್ಯಕ್ತಿತ್ವ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಶ್ರದ್ಧ್ಧಾಂಜಲಿ ಕಾರ್ಯಕ್ರಮ ‘ಸ್ವಾಭಿಮಾನಿಗೆ ಸಾವಿರದ ನುಡಿ ನಮನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನಪ್ರಿಯವಾಗಿದ್ದಾನೆ, ಎಷ್ಟು ತತ್ವ, ಸಿದ್ಧಾಂತ, ಜನೋಪಯೋಗಿಯಾಗಿ ಇದ್ದ ಎನ್ನುವುದು ಮುಖ್ಯ ಎಂದು ಹೇಳಿದರು.
ಅವರು ಉತ್ತಮ ಮನುಷ್ಯ ಹಾಗಾಗಿ ಮನುಷ್ಯತ್ವದ ಬಗ್ಗೆೆ ಅಪಾರ ಗೌರವ ಇಟ್ಟುಕೊಂಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳಿಗೆ ಮಾರು ಹೋಗಿದ್ದರು. ಅವಕಾಶ ವಂಚಿತರಿಗೆ ಸಮಾನ ಅವಕಾಶ ಕೊಡಿಸಬೇಕು ಎನ್ನುವುದು ಅವರ ಆಶಯವಾಗಿತ್ತು. ಸಾಮಾಜಿಕ ನ್ಯಾಯದ ಬಗ್ಗೆ ಕೊನೆಯವರೆಗೂ ಪ್ರತಿಪಾದಿಸಿ ಅದಕ್ಕೆೆ ಬದ್ಧರಾಗಿದ್ದರು ಎಂದು ಅಗಲಿದ ನಾಯಕನ ಗುಣಗಾನ ಮಾಡಿದರು.
ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ವಿಚಾರಧಾರೆಗಳಲ್ಲಿ ಯಾರಿಗೆ ಸ್ಪಷ್ಟತೆ ಇರುತ್ತದೋ ಅಂತಹವರು ಮನುಷ್ಯತ್ವದ ಪರ ಇರಲು ಸಾಧ್ಯ. ಮನುಷ್ಯತ್ವ ಎನ್ನುವುದು ಜಾತಿಯಿಂದ ಬರುವುದಿಲ್ಲ. ಧರ್ಮದಿಂದ ಬರುವುದಿಲ್ಲ. ಪ್ರೀತಿ ವಿಶ್ವಾಸದಿಂದ ಮಾತ್ರ ಬರುತ್ತದೆ. ಪ್ರತಿಯೊಬ್ಬರು ಒಬ್ಬರನ್ನು ಒಬ್ಬರು ಪ್ರೀತಿಸಬೇಕು. ಈ ಹಿನ್ನೆೆಲೆಯಲ್ಲಿ ಪ್ರಸಾದ್ ಅವರು ಎಲ್ಲರನ್ನೂ ಒಳಗೊಂಡ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ನಾವು ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಸ್ನೇಹಕ್ಕೆೆ ಧಕ್ಕೆೆ ಇರಲಿಲ್ಲ. ನಮ್ಮ ನಡುವೆ ಪರಸ್ಪರ ಗೌರವ, ಸ್ನೇಹ ಇತ್ತು ಎಂದು ತಮ್ಮ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರು.
ಪ್ರಸಾದ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ ಮೇಲೆ ಅವರನ್ನು ಭೇಟಿಯಾಗಿದ್ದೆೆ. ಹಿಂದಿನ ಸ್ನೇಹ ಹೇಗಿತ್ತೋ ಅದೇ ರೀತಿ ಮಾತನಾಡಿಸಿದರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಒಬ್ಬ ಮಾದರಿ ಜನಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಪ್ರಸಾದ್ ಅವರು ತೋರಿಸಿಕೊಟ್ಟು ಹೋಗಿದ್ದಾರೆ. ಅದನ್ನು ಪಾಲಿಸಿಕೊಂಡು ಮುನ್ನಡೆಯಬೇಕು. ತಮ್ಮ ಜೀವನದಲ್ಲಿ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿದ್ದ ಅವರು, ಸಿದ್ಧಾಂತದೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ಮುನ್ನಡೆದಿದ್ದರು. ಒಬ್ಬ ನೇತಾರನನ್ನು ನಾವು ಕಳೆದುಕೊಂಡಿದ್ದೇವೆ ಎಂದರು.
ಮನುಷ್ಯ ಹುಟ್ಟಿದಾಗ ಉಸಿರುತ್ತೆೆ, ಹೆಸರು ಇರಲ್ಲ. ಸತ್ತಾಗ ಹೆಸರಿರುತ್ತೆೆ ಉಸಿರು ಇರಲ್ಲ. ನಾನು ಕಂಡ ಸ್ವಾಾಭಿಮಾನಿ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಈಗ ನಮ್ಮ್ಮೊಂದಿಗೆ ಇಲ್ಲ. ಆದರೆ, ಅವರ ಸಾರ್ಥಕ ಬದುಕು, ಅವರು ಬದುಕಿದ ಮಾರ್ಗ ಸೈದ್ಧಾಂತಿಕ ನಿಲುವುಗಳು ಸದಾ ನಮ್ಮೊಂದಿಗೆ ಇವೆ ಎಂದರು.
ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಪ್ರಸಾದ್, 6 ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವುದು ಅಷ್ಟು ಸುಲಭವಲ್ಲ, ವಿರಳ-ವಿಶಿಷ್ಠ ಜನಪ್ರತಿನಿಧಿಯಾದ ಅವರು ಯಾವ ಪಕ್ಷದಲ್ಲೇ ನಿಂತರು ಮತದಾರರು ಗೆಲ್ಲಿಸುತ್ತಿದ್ದರು. ಇದೇ ಅವರ ವ್ಯಕ್ತಿತ್ವಕ್ಕೆೆ ಸಾಕ್ಷಿ ಎಂದು ಹೇಳಿದರು.
ಬುದ್ಧ ದಮ್ಮ ವಿಹಾರ ಡಾ.ಕಲ್ಯಾಣಸಿರಿ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಸಂಸದ ಪ್ರತಾಪ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಚ್.ದ್ವಾರಕನಾಥ್, ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net