ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚನೆ; ರಾಮ ಸೇನೆ ಅಧ್ಯಕ್ಷ ಪ್ರಸಾದ್ ಅತ್ತಾವರ ಬಂಧನ

attavara
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ 17.5 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಮಸೇನೆ ಸಂಸ್ಥಾಪಕಧ್ಯಕ್ಷ ಪ್ರಸಾದ್ ಅತ್ತಾವರ ಎಂಬುವನನ್ನು ಬಂಧಿಸಲಾಗಿದೆ.

ವಿವಿ ಪ್ರಾಧ್ಯಾಪಕರಿಗೆ ವಿವೇಕ್ ಆಚಾರ್ಯ ಎನ್ನುವವರ ಮೂಲಕ ಪ್ರಸಾದ್ ಅತ್ತಾವರ ಪರಿಚಯವಾಗಿದ್ದು, ತನಗೆ ರಾಜ್ಯ-ದೇಶದ ವಿವಿಧ ಗಣ್ಯ ವ್ಯಕ್ತಿಗಳ ಪರಿಚಯವಿದೆ, ನಿಮಗೆ ಬೇಕಾದ ಹುದ್ದೆ ಕೊಡಿಸಬಲ್ಲೆ ಎಂದು ನಂಬಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಒತ್ತಾಯವಾಗಿ 17.5 ಲಕ್ಷ ರೂ ಪಡೆದು ಉಳಿದ ಹಣಕ್ಕಾಗಿ 3 ಖಾಲಿ ಚೆಕ್ ಪಡೆದಿದ್ದ. ಚೆಕ್ ವಾಪಾಸ್ ನೀಡುವಂತೆ ಕೇಳಿದಾಗ ಕೊಡದೆ ಜೀವ ಬೆದರಿಕೆ ಹಾಕಿದ್ದ. ಈ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸಾದ್ ಅತ್ತಾವರ ವಿರುದ್ಧ ಮಂಗಳೂರು ಬಂದರು ಠಾಣೆ, ಪೂರ್ವ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಬಂದರು ಮತ್ತು ಕಂಕನಾಡಿ ನಗರ ಠಾಣೆ ರೌಡಿ ರಿಜಿಸ್ಟರ್ ತೆರೆಯಲಾಗಿದೆ. ಈ ಹಿಂದೆ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅತ್ತಾವರ, ಶ್ರೀರಾಮ ಸೇನೆಯಲ್ಲಿ ಇದ್ದ. ಬಳಿಕ ಅದರಿಂದ ಹೊರ ಬಂದು, ತನ್ನದೇ ಆದ ರಾಮ ಸೇನೆ ಹೆಸರಿನ ಸಂಘಟನೆ ಕಟ್ಟಿಕೊಂಡು ಸಂಸ್ಥಾಪಕಾಧ್ಯಕ್ಷನಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net