ಬಿತ್ತನೆ ಬೀಜದ ದರ ಇಳಿಕೆಗೆ ಒತ್ತಾಯ: ನಗರದಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

Prantha krushi koolikarara Sanga Protest Mandya
Published on

ಮಂಡ್ಯ: ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬೆಲೆಗಳನ್ನು ಇಳಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಕಾರ್ಯಕರ್ತರು, ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಶತಮಾನದಲ್ಲೇ ಕಂಡರಿಯದಂತಹ ಭೀಕರ ಬರಗಾಲವನ್ನು ಕಳೆದ ವರ್ಷ ಅನುಭವಿಸಲಾಗಿದೆ. ಹೀಗಿರುವಾಗ ಯಾವುದೇ ಅರ್ಥಪೂರ್ಣ ಬರ ಪರಿಹಾರದ ಕ್ರಮಗಳಿಲ್ಲದೇ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ರೈತರು ಸಿಲುಕುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡುವುದು ಬೇಡ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ನಡೆಸಲು ರೈತರಿಗೆ ಅನುಕೂಲವಾಗುವಂತಹ ಕ್ರಮವಾಗಬೇಕಿದೆ. ಈ ನಿಟ್ಟಿನಲ್ಲಿ ಬಿತ್ತನೆ ಬೀಜಗಳ ದರವನ್ನು ಇಳಿಕೆ ಮಾಡಬೇಕು. ಅಂತೆಯೇ ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟವನ್ನು ತಡೆಯಬೇಕು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರವನ್ನು ಹೊಂದಾಣಿಕೆ ಮಾಡಿಕೊಂಡಿರುವುದನ್ನು ರೈತರಿಗೆ ವಾಪಸ್ ಮಾಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು. ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಮೈಕ್ರೋಫೈನಾನ್ಸ್ ಹಾವಳಿ ತಡೆಗಟ್ಟಿ ರೈತ ಕುಟುಂಬವನ್ನು ರಕ್ಷಣೆ ಮಾಡಬೇಕು. ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡದ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಸಹ ಸಂಚಾಲಕ ವಿಶ್ವನಾಥ್ ಸೊಳ್ಳೆಪುರ, ಸಹ ಸಂಚಾಲಕ ಲಿಂಗರಾಜಮೂರ್ತಿ, ಮಹದೇವು, ಗುರುಸ್ವಾಮಿ, ಸತೀಶ್, ಶಿವಕುಮಾರ್, ಮರಿಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net