ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ಪ್ರಾಣಾಯಾಮ ಪೂರಕ

3 (1)
Published on

ಮೈಸೂರು: ವೈದ್ಯಕೀಯ ಚಿಕಿತ್ಸೆ ಜತೆಗೆ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ರೋಗಗಳಿಂದ ಗುಣಮುಖವಾಗಬಹುದು ಎಂದು ನಿವೃತ್ತ ಪ್ರಾಧಾಪಕ ಡಾ.ಪ್ರಧಾನ್ ಗುರುದತ್ತ ಅಭಿಪ್ರಾಯಿಸಿದರು.

ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದೇವಕಿ ಮಾಧವ್ ಅವರ ‘ವೈಜ್ಞಾನಿಕ ಪ್ರಾಣಾಯಾಮ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈಜ್ಞಾನಿಕ ಪ್ರಾಣಾಯಾಮ ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ಪೂರಕವಾಗಿದೆ. ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ರೋಗ ನಿವಾರಣೆಗೂ ನೆರವಾಗಲಿದೆ ಎಂದರು.

ವೈಜ್ಞಾನಿಕ ಪ್ರಾಣಾಯಾಮದಿಂದ ಕರೊನಾ ಸೋಂಕು ಕೂಡ ಬರುವುದಿಲ್ಲ. ಈ ರೋಗದ ಭೀತಿಯಿಂದ ಎಲ್ಲರೂ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿದು ಮನೆಯಲ್ಲಿದ್ದಾರೆ. ಆದರೂ ದೇವಕಿ ಮಾಧವ್ ಅವರ ಶಿಷ್ಯಂದಿರೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ. ವೈಜ್ಞಾನಿಕ ಪ್ರಾಣಾಯಾಮ ಅಭ್ಯಾಸ ಮಾಡುವ ವ್ಯಕ್ತಿಗಳಿಗೆ ಕರೊನಾ ಬರುವುದಿಲ್ಲ ಎಂದರು.

ಪ್ರಾಣ ಎಂದರೆ ಉಸಿರು. ಅದಕ್ಕೆ ಆಯಾಮ ನೀಡುವುದೇ ಪ್ರಾಣಾಯಾಮ. ಯೋಗದಲ್ಲಿ 8 ಅಂಶಗಳು ಸೇರಿವೆ. ಅದರಲ್ಲಿ ಪ್ರಾಣಾಯಾಮ 4ನೇ ಅಂಶ. ಇಂತಹ ವಿಚಾರವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಪ್ರಾಣಾಯಾಮ ಹೇಗೆ ಸಹಕಾರಿ ಎಂಬ ಮಾಹಿತಿ ಇದ್ದು, ವೈಜ್ಞಾನಿಕವಾಗಿ ಪ್ರಾಣಾಯಾಮ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗಿದೆ ಎಂದರು.

ಉಪನಿಷತ್ ಯೋಗ ಸೆಂಟರ್ ಟ್ರಸ್ಟ್‌ನ ಸಂಸ್ಥಾಪಕ ಸುಧೇಶ್‌ಚಂದ್ರ, ಅಮೆರಿಕದ ಯೋಗಾ ಯೂನಿವರ್ಸಿಟಿ ಾರ್ ಅಮೆರಿಕಾಸ್‌ನ ಉಪಕುಲಪತಿ ಡಾ.ದೇವರಾಜ್ ಗುರೂಜಿ ಮಾತನಾಡಿದರು.

ವೈದ್ಯ ಡಾ.ನಾರಾಯಣ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಎಲ್.ಎನ್.ಅಯ್ಯ, ಜಿಎಸ್‌ಎಸ್ ಯೋಗ ಸಂಶೋಧನಾ ಕೇಂದ್ರದ ಸ್ಥಾಪಕ ಶ್ರೀಹರಿ, ಲೇಖಕ ದೇವಕಿ ಮಾಧವ್, ಪ್ರೊ.ಕೆ.ರಾಮಮೂರ್ತಿ, ಪತ್ರಕರ್ತ ಚೀ.ಜ.ರಾಜೀವ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net