

ಮಂಗಳೂರು: ಮಹಾತ್ಮರ ತತ್ವಾದರ್ಶಗಳಿಂದ ಸಮಗ್ರ ಭಾರತ ನಿರ್ಮಾಣವಾಗಿದ್ದು, ಮಹಾತ್ಮರ ಬದುಕು ಇಂದಿನ ಪೀಳಿಗೆಗೆ ದಾರಿದೀಪ ಎಂದು ವಿಶ್ರಾಂತ ಪ್ರಾಧ್ಯಾಪಕ ಮತ್ತು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆ ಸಲುವಾಗಿ ಕೂಳೂರಿನಲ್ಲಿರುವ ಏನೆಪೋಯ ಶಿಕ್ಷಣ ಸಂಸ್ಥೆಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ಜನಿಸಿದ ಅನೇಕ ಮಹಾತ್ಮರು ಸ್ವದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ತಮ್ಮ ವರ್ಚಸ್ಸಿನ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಪಾದಿಸಿ ಜಗತ್ಪ್ರಸಿದ್ಧರಾಗಿದ್ದಾರೆ. ಅಂತವರ ಬದುಕು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದ ಮೂಲಕ ಪ್ರಾಚ್ಯದ ಮಹಾಪ್ರವಾದಿಯಾಗಿ ಹೊರಹೊಮ್ಮಿದ್ದಲ್ಲದೆ ಏಳಿ ಎದ್ದೇಳಿ ಎಂಬ ಅಮೃತವಾಣಿಯ ಮೂಲಕ ಯುವಜನರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ ರಾಜ್ ಮಾತನಾಡಿ, ಇಂದಿನ ಯುವಜನರು ಹಿರಿಯರ ಆದರ್ಶಗಳನ್ನು ಪಾಲಿಸಿ ಯೋಗ್ಯ ದಾರಿಯಲ್ಲಿ ನಡೆಯಬೇಕು ಎಂದದರು.
ಪ್ರಾಂಶುಪಾಲ ಡಾ.ಅರುಣ್ ಎ.ಭಾಗವತ್, ಉಪಪ್ರಾಂಶುಪಾಲರಾದ ಡಾ. ಶರೀನಾ ಪಿ., ನಾರಾಯಣ್, ಸುಕುಮಾರ್, ಎನ್‌ಎಸ್‌ಎಸ್ ಅಧಿಕಾರಿಗಳಾದ ನಿಯಾಝ್ ಪಿ., ಡಾ. ಸುಮಂಗಲ ರಾವ್, ಡಾ. ದಿನಕರ ಪಚ್ಚನಾಡಿ ಮತ್ತು ಧನುಷ್ ಬಿ. ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.