ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಂಡಳಿ ಸ್ಥಾಪನೆಗೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Pranavavananda Swamiji
Published on

ಹುಬ್ಬಳ್ಳಿ: ರಾಜ್ಯದ ಹಿಂದುಳಿದ ಸಮುದಾಯಗಳಾದ ಈಡಿಗ, ಬಿಲ್ಲವ, ನಾಮಧಾರಿ, ದೀವರ ಮತ್ತು ಒಳಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಬ್ರಹ್ಮಶ್ರೀ ನಾರಾಯಣ ನಿಗಮ ಮಂಡಳಿ ಸ್ಥಾಪಿಸಬೇಕು. ಅದಕ್ಕಾಗಿ 500 ಕೋಟಿ ರೂ. ಮೀಸಲು ಇಡಬೇಕು ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ 26 ಒಳ ಪಂಗಡಗಳ ಒಟ್ಟು 70 ಲಕ್ಷ ಜನ ನಮ್ಮ ಸಮುದಾಯದವರಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ, ಸುನೀಲಕುಮಾರ ಸೇರಿದಂತೆ ಏಳು ಶಾಸಕರು ನಮ್ಮ ಸಮುದಾಯದವರು. ರಾಜ್ಯದ 30 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರು ನಿರ್ಣಾಯಕರಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಚುನಾವಣೆಯಲ್ಲಿ ಸೂಕ್ತ ಉತ್ತರ ಕೊಡಬೇಕಾಗುತ್ತದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಇತರ ಶಾಸಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ಮಾಡಿ ಜು.29, 30ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಸಮಾಜ ತೀರಾ ಹಿಂದುಳಿದ ಹಿನ್ನೆಲೆಯಲ್ಲಿ 2ಎ ಕೆಟಗರಿಯಿಂದ ಪ್ರವರ್ಗ 1ಕ್ಕೆ ಏರಿಸಬೇಕು. ಹುಬ್ಬಳ್ಳಿಯಲ್ಲಿ ಸಮುದಾಯದ ಮುಖಂಡರ ರಾಜ್ಯಮಟ್ಟದ ಸಭೆ ನಡೆಸಿ ಇದಕ್ಕಾಗಿ ಸಮಿತಿ ರಚಿಸಲಾಗಿದೆ. ನಮ್ಮ ಸಮುದಾಯದವರಾದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಹಾಗಾಗಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಹೆಸರು ಇಡಬೇಕು ಎಂದು ಒತ್ತಾಯಿಸಿದರು.
ಕೇಂದ್ರೀಯ ಹೋರಾಟ ಸಮಿತಿ ಅಧ್ಯಕ್ಷ ಸತೀಶ ಗುತ್ತೇದಾರ, ವೆಂಕಟೇಶ ಗುಂಡನವರ, ನಾಮದಾರಿ ಸಮಾಜದ ಅಧ್ಯಕ್ಷ ಟಿ.ಡಿ.ನಾಯಕ, ಪದ್ಮನಾಭ, ಅಚ್ಯುತ ಕಲ್ಮಾಡಿ, ಪ್ರಕಾಶ, ಸತ್ಯಜಿತ ಸುರತ್ಕಲ್​, ಮುಂತಾದವರು ಇದ್ದರು.

ಸೇಂದಿ ಮಾರಾಟಕ್ಕೆ ಅನುಮತಿ ಕೊಡಿ
ಸಮುದಾಯದ ಪಾರಂಪರಿಕವಾಗಿ ಜನ ಸೇಂದಿ (ನೀರಾ) ಇಳಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. 2004ರಲ್ಲಿ ಸರ್ಕಾರ ಇದನ್ನು ಬಂದ್​ ಮಾಡಿದ ಹಿನ್ನೆಲೆಯಲ್ಲಿ ಸಮಾಜದ ಜನ ಸಂಕಷ್ಟಕ್ಕಿಡಾಗಿದ್ದಾರೆ. ಮಂಗಳೂರು, ಉಡುಪಿ ಭಾಗದಲ್ಲಿ ಸೇಂದಿ ಮಾರಾಟಕ್ಕೆ ಈಗಲೂ ಅವಕಾಶವಿದೆ. ಗೋವಾ, ತೆಲಂಗಾಣ, ಕೇರಳ ಭಾಗದಲ್ಲೂ ಅವಕಾಶವಿದೆ. ಅದೇ ರೀತಿ ರಾಜ್ಯದಲ್ಲಿ ಈಚಲು ಮರ, ತಾಳೆ ಮರ, ತೆಂಗಿನಮರ ಇದ್ದಲ್ಲಿ ಸೇಂದಿ ಇಳಿಸಿ, ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net