

ಕಲಬುರಗಿ: ಈಡಿಗ, ಬಿಲ್ಲವ, ನಾಮದಾರಿ ಸಮುದಾಯದವರಿಗಾಗಿ ಹಿಂದಿನ ಸರ್ಕಾರ ನಾರಾಯಣಗುರು ನಿಗಮ ಘೋಷಣೆ ಮಾಡಿತ್ತು. ಆದರೆ ಪ್ರಸ್ತುತ ಸರ್ಕಾರ ಎಲ್ಲ ನಿಗಮಗಳಿಗೆ ಅನುದಾನ ನೀಡಿದ್ದು, ನಮ್ಮ ನಿಗಮಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಕರದಾಳ ನಾರಾಯಣಗುರು ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
ಹಿಂದಿನ ಸರ್ಕಾರ ನಿಗಮ ಘೋಷಿಸಿ, ಕುಲಶಾಸ್ತ್ರೀಯ ಅಧ್ಯಯನಕ್ಕೆ ೨೫ ಲಕ್ಷ ರೂ. ಮೀಸಲಿಟ್ಟಿತ್ತು. ಆದರೆ ಪ್ರಸ್ತುತ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮುಂದಾಗುತ್ತಿಲ್ಲ. ಇದರಿಂದ ಎಸ್‌ಟಿಗೆ ಸೇರ್ಪಡೆ ಮಾಡುವ ಆಗ್ರಹಕ್ಕೆ ತೊಡಕಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಿಗಮಕ್ಕೆ ಹಣ ನೀಡಬೇಕು, ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು, ಎಸ್‌ಟಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಜ.೪ರಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಉಪವಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಈಡಿಗ ಸಮಾಜದ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ವಿವಿಧ ನಿಗಮಗಳಲ್ಲಿ ಸ್ಥಾನ ನೀಡಿತ್ತು. ಆದರೆ ಪ್ರಸ್ತುತ ಸರ್ಕಾರ ಒಂದು ಮಂತ್ರಿ ಸ್ಥಾನ ಮಾತ್ರ ನೀಡಿದೆ. ನಮ್ಮ ಸಮುದಾಯಕ್ಕೆ ಹೆಚ್ಚಿನ ಸ್ಥಾನ ಮಾನ ನೀಡಬೇಕು. ಈಡಿಗರ ಕುಲಕಸುಬು ರಕ್ಷಿಸಬೇಕು, ಶಿವಮೊಗ್ಗ ವಿಮಾನ ನಿಲ್ದಾಣ, ರಾಯಚೂರು ಕೆರೆಗೆ ಬಂಗಾರಪ್ಪ ಅವರ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ. ಮಾಲಿಕಯ್ಯ ಗುತ್ತೇದಾರ್ ಅವರನ್ನು ಕೈಬಿಟ್ಟಿದ್ದು, ಬೇರೆ ಯಾರಿಗೂ ನೀಡಿಲ್ಲ. ಈಡಿಗರಿಗೆ ಮಂಗಳೂರು, ದಕ್ಷಿಣ ಕನ್ನಡದ ಸಂಸದ ಟಿಕೆಟ್ ನೀಡಬೇಕು. ಕಾಂತರಾಜ ವರದಿ ಬಿಡುಗಡೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ವೆಂಕಟೇಶ ಕಡೆಚೂರ, ಕುಪೇಂದ್ರ ಗುತ್ತೇದಾರ, ರಾಜೇಶ ಗುತ್ತೇದಾರ, ಸದಾನಂದ ಪೆರ್ಲ ಇದ್ದರು.