ಕಡಬ: ಬೆಂಗಳೂರು ಪ್ರಣವ್ ಫೌಂಡೇಷನ್ ವತಿಯಿಂದ ಕಡಬ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಯೋಗದಲ್ಲಿ ಕಡಬದ ಅನುಗ್ರಹ ಸಭಾಭವನದಲ್ಲಿ ಸೆ.21ರಂದು ಗುರುವಂದನಾ ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಸಾಧಕ ಶಿಕ್ಷಕರಿಗೆ ಪ್ರಣವ ಗುರು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಸುಳ್ಯದಲ್ಲಿ ಕಾರ್ಯಕ್ರಮ ಆಯೋಜಿಸಿ 20 ಸಾಧಕ ಶಿಕ್ಷಕರಿಗೆ, 20 ಅಂಗನವಾಡಿ ಶಿಕ್ಷಕಿಯರಿಗೆ, 20 ವಿಶೇಷ ಶಾಲೆಗಳ ಶಿಕ್ಷಕರನ್ನು ಪ್ರಣವ ಗುರು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬದಲ್ಲಿ ಕಾರ್ಯಕ್ರಮ ಆಯೋಜಿಸಿ ಶಾಲೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಪ್ರಾಥಮಿಕ ಶಾಲೆ 13,ಪ್ರೌಢಶಾಲೆಯ 6 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ಪಡೆದ ಶಿಕ್ಷಕರನ್ನು ಮಾದರಿಯಾಗಿಸಿಕೊಂಡು ಶಾಲೆಗಳ ಅಭಿವೃದ್ಧಿಯಲ್ಲಿ ಇನ್ನಷ್ಟು ಹೆಚ್ಚಿನ ಶಿಕ್ಷಕರು ತೊಡಗಿಸಿಕೊಳ್ಳುವಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರಣವ್ ಫೌಂಡೇಷನ್ ಟ್ರಸ್ಟಿ ಮಹೇಶ್ ಕುಮಾರ್ ಮೇನಾಲ ಮಾತನಾಡಿ, 2021ರಲ್ಲಿ ಆರಂಭವಾದ ಸಂಸ್ಥೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಮಾಜಕ್ಕೆ ಕೊಡುಗೆಯಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಗಾರ ನಡೆಯಲಿದೆ ಎಂದರು.