

ಪ್ರಶಾಂತ ಭಾಗ್ವತ ಉಡುಪಿ
ನಿರಂತರ ಕಲಿಕೆ, ಅಧ್ಯಯನಗಳಿಂದ ಸಾಧನೆ ಮಾಡುವವರ ನಡುವೆ ಸಾಧಿಸಬೇಕೆಂಬ ಆಸಕ್ತಿ ಮತ್ತು ಶ್ರಮದಿಂದಲೂ ಸಾಧನೆ ಮಾಡುವವರು ಇದ್ದಾರೆ. ಅಂತಹವರ ಸಾಲಿನಲ್ಲಿ ಯುವ ಪ್ರತಿಭೆ ಪ್ರಣತಿ ಜತ್ತನ್ ಗಮನ ಸೆಳೆದಿದ್ದಾರೆ.
ಯಾವುದೇ ಗುರುವಿನ ಮೂಲಕ ಚಿತ್ರಕಲೆ ಕಲಿಯದೆ ಸ್ವಯಂ ಹಿತಾಸಕ್ತಿಯಿಂದ ಕರಗತ ಮಾಡಿಕೊಂಡ ಪ್ರಣತಿ, ಚಿತ್ರಿಸಿದ ರಾಮಾಯಣದ ಕಥೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದಿದ್ದಾಳೆ.
ಉಡುಪಿ ವಿದ್ಯೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಣತಿ, ಮಲ್ಪೆ ಸಮೀಪದ ನೇಜಾರು ನಿವಾಸಿ ಗೋವರ್ಧನ ಜತ್ತನ್ ಮತ್ತು ಸುಜಾತಾ ದಂಪತಿಯ ಪುತ್ರಿ. 6 ಫೀಟ್ ಎತ್ತರ, 2 ಫೀಟ್ ಅಗಲದ ಪ್ಲೈವುಡ್ ಮೇಲೆ ಕ್ಯಾನ್ವಾಸ್ ಶೀಟ್ನಲ್ಲಿ ಎಕ್ರಾಲಿಕ್ ಪೇಂಟಿಂಗ್ನಲ್ಲಿ ಸಂಪೂರ್ಣ ರಾಮಾಯಣ ಚಿತ್ರಿಸಿದ್ದಾಳೆ. ಕೇವಲ 21 ಗಂಟೆಯಲ್ಲಿ ರಾಮಾಯಣ ಚಿತ್ರಿಸಿ ದಾಖಲೆಯೊಂದಿಗೆ ಪ್ರಶಸ್ತಿ ಗಳಿಸಿದ್ದಾಳೆ.