

ಮಂಡ್ಯ: ಭತ್ತದ ಬೆಳೆ ಕಟಾವು ಮಾಡಲಾಗಿದ್ದರೂ ಖರೀದಿ ಕೇಂದ್ರ ತೆರೆಯದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ರೈತ ಸಮೂಹಕ್ಕೆ ರಾಜ್ಯಸರ್ಕಾರ ಹಾಗೂ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆಂದು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸುಮಾರು 57,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಜುಲೈನಲ್ಲಿ ನಾಟಿ ಮಾಡಿದ ಬೆಳೆಯನ್ನು ನವೆಂಬರ್, ಡಿಸೆಂಬರ್‌ನಲ್ಲಿ ಕಟಾವು ಮಾಡಿದ್ದಾರೆ. ಆದರೆ ರಾಜ್ಯಸರ್ಕಾರ ನವೆಂಬರ್ ತಿಂಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಖರೀದಿ ಮಾಡದೆ ವಂಚಿಸಿದೆ. ಭತ್ತ ಬೆಳೆಯಲು ಮಾಡಿದ ಸಾಲಕ್ಕಾಗಿ ಕಟಾವು ಮತ್ತು ಇನ್ನಿತರ ವೆಚ್ಚಕ್ಕಾಗಿ ಹಾಗೂ ಭತ್ರ ಸಂಗ್ರಹ ಮಾಡಿ ಇಟ್ಟುಕೊಳ್ಳಲು ಮನೆಯಲ್ಲಿ ಸ್ಥಳದ ಅಭಾವದಿಂದ ಮಾರಾಟ ಮಾಡಲು ತರಾತುರಿಯಲ್ಲಿದ್ದು, ಇಂತಹ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು 1,800 ರೂನಿಂದ 2 ಸಾವಿರ ರೂ.ಗೆ ಖರೀದಿ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಾಲ್ಗೆ 2,300 ರೂ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಸಹ ರೈತರ ಅಸಹಾಯಕತೆಯನ್ನ ದುರುಪಯೋಗಪಡಿಸಿಕೊಂಡು ದಲ್ಲಾಳಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡಿ ವಂಚನೆ ಮಾಡುತ್ತಿದ್ದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಸಹ ಸಂಚಾಲಕ ಎನ್.ಲಿಂಗರಾಜಮೂರ್ತಿ, ಮಹಾದೇವ, ಸತೀಶ್, ಕುಳ್ಳೇಗೌಡ, ಗುರುಸ್ವಾಮಿ, ಶ್ರೀನಿವಾಸ್, ರಾಮಣ್ಣ, ದೊರೆಸ್ವಾಮಿ, ಎ.ಎಲ್.ಶಿವಕುಮಾರ್, ಚಿಕ್ಕರಾಜಮ್ಮ, ಕೆ.ಎಸ್.ಮೂರ್ತಿ, ಎಚ್.ಲಿಂಗೇಗೌಡ ಇತರರಿದ್ದರು.