

ಮೈಸೂರು: ನಾಲ್ವಡಿ ಅವರ ಜನ್ಮದಿಂದೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಯ ಸಾಧಿಸಿರುವುದು ಖುಷಿಯಾಗಿದೆ. ಇದಕ್ಕೆ ಕಾರಣರಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಂಸದರಾಗಿದ್ದಾಗ, ಅವರಿಗೆ ಸಹಕಾರ ನೀಡಿದ್ದೆ. ಸಲಹೆ ನೀಡುತ್ತಿದ್ದೆ. ಮಗನಿಗೂ ಏನಾದರೂ ಹೇಳಬೇಕೆನಿಸಿದಾಗ ಹೇಳುವೆ ಎಂದರು.
ಜನರಿಗೆ ಮೊದಲ ಪ್ರಾಮುಖ್ಯತೆ ನೀಡಬೇಕು. ಸಕರಾತ್ಮಕ ಹಾಗೂ ನಕರಾತ್ಮಕ ಟೀಕೆಗಳು ಬಂದೇ ಬರುತ್ತವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಟೀಕೆ ಬಂದಾಗಲೇ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಧ್ಯ. ಸಚಿವ ಸ್ಥಾನ ಸಿಗುವುದೆಲ್ಲ ಅದರ ಮೇಲೆಯೇ ಎಂದು ತಿಳಿಸಿದರು.
ಅರಮನೆ ಹಾಗೂ ಸರ್ಕಾರದ ವ್ಯಾಜ್ಯಗಳು ಇದ್ದೇ ಇವೆ. ಅದನ್ನು ನ್ಯಾಯಾಲಯದಿಂದ ಬಗೆಹರಿಸಿಕೊಳ್ಳುತ್ತೇವೆ. ಅರಮನೆಯ ವ್ಯಾಜ್ಯಗಳಿಗೂ ಈಗ ಬಂದಿರುವ ಅಧಿಕಾರಕ್ಕೂ ಸಂಬಂಧ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.