

ಮೈಸೂರು: ಮಂಡ್ಯದ ಬೇಬಿಬೆಟ್ಟ ಸುತ್ತಲಿನ 1623 ಎಕರೆ ಜಾಗ ಮೈಸೂರು ರಾಜಮನೆತನಕ್ಕೆ ಸೇರಿದ ಆಸ್ತಿಯಾಗಿದ್ದು, ಆ ಜಾಗದಲ್ಲಿ ಕೆಆರ್‌ಎಸ್ ಜಲಾಶಯದ ಸುರಕ್ಷತೆ ಪರೀಕ್ಷಿಸಲು ಟ್ರಯಲ್ ಬ್ಲಾಸ್ಟ್‌ಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಸರ್ಕಾರ ನಮಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಮೈಸೂರು ರಾಜಮನೆತನವನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವೇನೊ ಯಾರೋದು ಆಸ್ತಿ ಕಬಳಿಸಲು ಹೊರಟ್ಟಿದ್ದೇವೇನೋ ಎಂಬ ರೀತಿಯಲ್ಲಿ ಸರ್ಕಾರಗಳು ಯೋಚಿಸುತ್ತಿವೆ. ಇದು ನಮಗೆ ಸರ್ಕಾರದ ಭಾಗದಿಂದ ಆಗುತ್ತಿರುವ ಕಿರುಕುಳವಾಗಿದೆ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರ್ಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
10 ರೂಪಾಯಿ ಬೆಲೆ ಬಾಳುವುದನ್ನು 10 ಪೈಸೆಗೆ ತೆಗೆದು ಕೊಳ್ಳುವ ಮನಃಸ್ಥಿತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ. ಬೇಬಿಬೆಟ್ಟದ ತಪ್ಪಲಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಸರ್ಕಾರಕ್ಕೆ ನಾನು ನಾನು ಧನ್ಯವಾದ ತಿಳಿಸುತ್ತೇನೆ. ಇದರಿಂದ ನನ್ನ ಕಾನೂನು ಜ್ಞಾನ ಹೆಚ್ಚಾಗಿದೆ. ಬೇಬಿ ಬೆಟ್ಟದ ವಿಚಾರದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಎಚ್ಚರಿಸಿದರು.
ಮೈಸೂರು ಸಂಸ್ಥಾನ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾದ ಸಂದರ್ಭ ಕೇಂದ್ರ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ 1950ರಲ್ಲಿ ಒಡಂಬಡಿಕೆ ನಡೆಯಿತು. ಆ ಒಡಂಬಡಿಕೆಯಲ್ಲಿ ಮೈಸೂರು ರಾಜಮನೆತಕ್ಕೆ ಸೇರಿದ ಆಸ್ತಿಗಳು ಯಾವುದು, ಸರ್ಕಾರಕ್ಕೆ ಸೇರಿದ ಆಸ್ತಿಗಳು ಯಾವುದು ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರ ಆದೇಶದ ಮೂಲಕ ಖಚಿತ ಪಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಬಳಿಯೂ ದಾಖಲೆಗಳಿವೆ. ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ ಸರ್ಕಾರ ನಮಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ಮತ್ತು ಮೈಸೂರು ಸಂಸ್ಥಾನದ ನಡುವೆ ನಡೆದ ಒಡಂಬಡಿಕೆ ಪ್ರಕಾರ ಚಾಮುಂಡಿಬೆಟ್ಟದ ತಪ್ಪಲು ಹಾಗೂ ಬೇಬಿ ಬೆಟ್ಟದ ತಪ್ಪಲಿನ ಜಾಗ ಮೈಸೂರು ರಾಜಮನೆತಕ್ಕೆ ಸೇರಿದ ಖಾಸಗಿ ಆಸ್ತಿಯಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಭೂ ವ್ಯಾಜ್ಯ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರವಾಗಿ ಆಗಿದ್ದು, ಅದೇ ರೀತಿ ಬೇಬಿಬೆಟ್ಟದ ಜಾಗ ಸಹ ನಮಗೆ ಸೇರಿದ್ದು. ನಮಗೆ ಸೇರಿದ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ನಮ್ಮ ಅನುಮತಿ ಪಡೆಯಬೇಕಾಗಿತ್ತು. ಆದರೆ, ಯಾವುದೇ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿರುವುದು ಸರಿಯಲ್ಲ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದು ಸರಿಯಲ್ಲ. ಸರ್ಕಾರ ಇದಕ್ಕೆ ಬೇರೆ ಜಾಗ ಗುರುತಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.