ದೇಶದ ಸವಾಲು ಎದುರಿಸಲು ಗಾಂಧಿ ಆದರ್ಶ, ಕೃಷ್ಣ ಶೆಟ್ಟಿ ಜೀವನ ಪ್ರೇರಣೆ- ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ

mng-sep1-vv college1
‘ಸಮಾನತೆಗಾಗಿ ಸಂಘರ್ಷ’ (ಹೋರಾಟದಲ್ಲೇ ಕೃಷ್ಣ ಶೆಟ್ಟಿ ಬದುಕು) ಕೃತಿಯನ್ನು ಲೈಲಾ ಕರುಣಾಕರನ್ ಹಾಗೂ ‘ಮಣ್ಣಿಗೆ ಮರಳುವ ಮುನ್ನ’ (ಕೆ. ಪ್ರಮೋದ್ ಕುಮಾರ್ ರೈ ಅವರ ಸರ್ಕಾರಿ ಸೇವೆಯಿಂದ ಹೊಲದೆಡೆಗಿನ ನಡೆ) ಕೃತಿಯನ್ನು ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣ್ಯನ್ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

  • ದೇಶದಲ್ಲಿ ಅಸಮಾನತೆ, ಅಸಂತೋಷ, ಅತೃಪ್ತಿ, ಸಂದರ್ಭಗಳು ಹೆಚ್ಚುತ್ತಿವೆ. ಅನೇಕ ಸಂದರ್ಭಗಳಲ್ಲಿ ನಾವು ಜ್ವಾಲಾಮುಖಿಯಲ್ಲಿ ಕುಳಿತಿರುವಂತೆ ಭಾಸವಾಗುತ್ತಿದೆ. ಸರ್ಕಾರಕ್ಕಿಂತ ಮಿಲಿಟರಿ ಆಡಳಿತವೇ ಉತ್ತಮ ಎನ್ನುವ ಭಾವನೆ ದೇಶದಲ್ಲಿ ಬೆಳೆಯತೊಡಗಿದೆ. ಮಹಾತ್ಮ ಗಾಂಧೀಜಿ ಅವರ ಚಿಂತನೆ ಹಾಗೂ ಕಮ್ಯುನಿಸ್ಟ್ ನಾಯಕ ದಿವಂಗತ ಕೃಷ್ಣ ಶೆಟ್ಟಿಯವರಂತಹ ನಾಯಕರ ಆದರ್ಶಗಳು ನಮ್ಮ ಮುಂದಿರುವ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.
  • ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕಜೆಮಾರು ಕೆದಂಬಾಡಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ನಗರದ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ಆಯೋಜಿಸಲಾದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  • ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ, ಕೇರಳದ ಮಾಜಿ ಸಚಿವ ಎಂ.ಎ. ಬೇಬಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಉದಾತ್ತ ಆಲೋಚನೆಗಳನ್ನು ಜನರ ಮಧ್ಯೆ ಕೊಂಡೊಯ್ಯುವ ಕಾರ್ಯವಿಂದು ನಡೆಯಬೇಕಾಗಿದೆ ಎಂದರು.
  • ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ, ಮಾಜಿ ಶಿಕ್ಷಣ ಸಚಿವ ಎಂ.ಎ.ಬೇಬಿ, ಮಾಜಿ ಸಂಸದ ಪಿ. ಕರುಣಾಕರನ್, ಕೇರಳದ ಹಿರಿಯ ನಾಯಕ ಎ.ಕೆ.ಗೋಪಾಲನ್ ಅವರ ಪುತ್ರಿ ಲೈಲಾ ಕರುಣಾಕರನ್, ನಿವೃತ್ತ ಸೆಂಟ್ರಲ್ ಆಡಳಿತ ಟ್ರಿಬ್ಯೂನಲ್ ಸದಸ್ಯ ಸುಧೀರ್ ಕುಮಾರ್, ನಿವೃತ ್ತ ಅಪರ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಹ್ಮಣ್ಯನ್ ಮುಖ್ಯ ಅತಿಥಿಗಳಾಗಿದ್ದರು.
  • ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಮುಖಂಡ ಪ್ರಮೋದ್ ರೈ ಪ್ರಸ್ತಾವನೆಗೈದರು. ಡಾ. ಜತಿನ್ ಕೃಷ್ಣ ಹಾಗೂ ಕೋನಾರ್ಕ್ ರೈ ಅತಿಥಿಗಳನ್ನು ಗೌರವಿಸಿದರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ವಂದಿಸಿದರು. ಮಂಗಳೂರು ವಿವಿ ಕಾಲೇಜಿನ ಯುವ ರೆಡ್‌ಕ್ರಾಸ್ ಅಧಿಕಾರಿ ಡಾ.ಭಾರತಿ ಪಿಲಾರ್, ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.

((( ಬಾಕ್ಸ್….

ಗಾಂಧಿಯನ್ನು ಓದಲು ವಿದ್ಯಾರ್ಥಿಗಳಿಗೆ ಕರೆ

ಗಾಂಧಿ ಅವರ ‘ಸ್ವಾತಂತ್ರ್ಯ’ದ ಕಲ್ಪನೆ ವಿಸ್ತಾರವಾಗಿದೆ. ‘ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಬಂದಿದೆ. ಸಾಮಾಜಿಕ, ಆರ್ಥಿಕ ಬರಬೇಕಾಗಿದೆ’ ಎಂದು ಗಾಂಧಿ ಅವರು ಹತ್ಯೆಯಾಗುವ ವಾರದ ಮೊದಲು ಪ್ರಕಟವಾದ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದರು. ಅವರು ಸತ್ಯ ಅಹಿಂಸೆಯನ್ನು ಬದುಕಿನುದ್ದಕ್ಕೂ ಪಾಲಿಸಿದವರು. ನಾವೆಲ್ಲರೂ ಒಂದು ಎಂಬ ಸಾಮುದಾಯಿಕ ಸಮಾಜದ ಕಲ್ಪನೆಯ ಚಿಂತನೆಯನ್ನು ಬಿತ್ತಿದವರು ಮಹಾತ್ಮಗಾಂಧಿ. ವೈವಿಧ್ಯಮಯ ಸಂಸ್ಕೃತಿ, ಜನರು, ವಿಚಾರಧಾರೆಗಳು ನಮ್ಮ ಶಕ್ತಿಯೇ ಹೊರತು, ದೌರ್ಬಲ್ಯವಲ್ಲ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರತಿಪಾದಿಸಿದರು.
ಆದ್ದರಿಂದ ವಿದ್ಯಾರ್ಥಿಗಳು ಎಲ್ಲರೂ ಗಾಂಧಿಯನ್ನು ಓದಲೇ ಬೇಕು. ಗಾಂಧಿಯನ್ನು ಓದಿದ ಬಳಿಕ ಅವರ ವಿಚಾರಧಾರೆಗಳನ್ನು ಕೂಡ ಪ್ರಶ್ನಿಸಬಹುದು. ಅವರು ಕೂಡ ಪ್ರಶ್ನಾತೀತರಲ್ಲ. ಆದರೆ ಅವರನ್ನು ಅರ್ಥಮಾಡಿಕೊಳ್ಳದೆ ಟೀಕಿಸುವುದು ಸರಿಯಲ್ಲ ಎಂದು ಹೇಳಿದ ಅವರು, ಅವರನ್ನು ಓದದೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಟೀಕೆಗಳನ್ನು ನೋಡುವಾಗ ದುಃಖವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net