

ಕುಶಾಲನಗರ:
ಕಚೇರಿಗೆ ಬರುವ ಸಾರ್ವಜನಿಕರ ಜತೆಯಲ್ಲಿ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ಕಾನೂನು ರೀತಿಯಲ್ಲಿ ಅವರುಗಳ ಕೆಲಸವನ್ನು ಕಾಲಮಿತಿಯೊಳಗೆ ಮಾಡಿಕೊಡುವಂತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಬುಧವಾರ ಇಲ್ಲಿನ ನಗರ ಯೋಜನಾ ಪ್ರಾಧಿಕಾರದ ಕಚೇರಿ ಆವರಣದಲ್ಲಿ ನಡೆದ ನಗರ ಕುಡಾ ನೂತನ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಯಾರು ಬಂದರೂ ದಾಖಲೆಗಳು ಪರಿಪೂರ್ಣವಾಗಿದ್ದರೆ ಮಾತ್ರ ಅಂತ ಕೆಲಸಗಳನ್ನು ಮಾಡಬೇಕು. ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದರು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಹಳಷ್ಟು ಬಡಾವಣೆಗಳು ನಿರ್ಮಿಸಿದ್ದು ಮಾಲೀಕರಿಂದ ನಿವೇಶನಗಳನ್ನು ಖರೀದಿಸಿರುವ ಆನೇಕ ಖರೀದಿದಾರರು ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳು ದೊರಕದೆ ಸಂಕಟ ಅನುಭವಹಿಸುತ್ತಿದ್ದಾರೆ. ಆದುದರಿಂದ ಇಂಥ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕುಟ್ಟಂಡ ಪ್ರಮೋದ್ ಮುತ್ತಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ ೨೫ ವರ್ಷಗಳಿಂದ ದುಡಿಯುತ್ತಿದ್ದು ಪಕ್ಷವು ನನಗೆ ಆನೇಕ ಹುದ್ದೆಗಳನ್ನು ನೀಡಿದೆ ಅದರಲ್ಲಿ ಪಕ್ಷದ ನಗರ ಅಧ್ಯಕ್ಷ ಸ್ಥಾನ ಮತ್ತು ಎರಡು ಬಾರಿ ಪಟ್ಟಣ ಪಂಚಾಯತಿ ಸದಸ್ಯರಾಗಿ ಸೇವೆ ಮಾಡಿದ್ದು, ಈ ಬಾರಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಅವಕಾಶವನ್ನು ಕೊಟ್ಟಿದೆ. ಖಂಡಿತವಾಗಿಯೂ ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ರೀತಿಯ ಆಸೆ ಅಮಿಷಗಳಿಗೆ ಬಲಿಯಾಗದೆ ನೇರ, ದಿಟ್ಟ ಹಾಗೂ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುವ ಮೂಲಕ ನನ್ನ ಅಧ್ಯಕ್ಷ ಸ್ಥಾನಕ್ಕೆ ನ್ಯಾಯವನ್ನು ಸಲ್ಲಿಸುತ್ತೆನೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾದ ಕೆ.ಆರ್.ಕಿರಣ್ ಕುಮಾರ್. ವಿ.ಎಸ್.ಸಜಿ, ಕೆ.ಆರ್.ಸಂಗೀತಾ, .ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ, ಹಿರಿಯ ವಕೀಲ ಆರ್.ಕೆ.ನಾಗೇಂದ್ರ ಬಾಬು, ತಹಶಿಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.