

ಶಿವಮೊಗ್ಗ: ನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ನಗರದ ಹೊರವಲಯದ ರಾಗಿಗುಡ್ಡದಲ್ಲಿ ತಡೆದ ಪೊಲೀಸರು, ಶುಕ್ರವಾರ ತಡರಾತ್ರಿಯೇ ಎನ್.ಆರ್.ಪುರ ತಾಲೂಕಿಗೆ ಬಿಟ್ಟು ಬಂದಿದ್ದಾರೆ.
ಶುಕ್ರವಾರ ರಾತ್ರಿ ಶಿವಮೊಗ್ಗ-ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಬಳಿ ಮುತಾಲಿಕ್ ಅವರ ಕಾರನ್ನು ಪೊಲೀಸರು ತಡೆಗಟ್ಟಿದ್ದು ತಡರಾತ್ರಿವರೆಗೆ ಹೊನ್ನಾಳಿ ರಸ್ತೆಯಲ್ಲಿ ಹೈಡ್ರಾಮ ನಡೆಯಿತು.
ಕೊನೆಗೆ ಶಿವಮೊಗ್ಗ ಪ್ರವೇಶಿಸದಂತೆ ನಿರ್ಬಂಧವಿರುವ ಜಿಲ್ಲಾಧಿಕಾರಿಗಳ ಆದೇಶ ನೀಡಿದರು. ಇದರಿಂದ ಕೆರಳಿದ ಪ್ರಮೋದ್ ಮುತಾಲಿಕ್, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾದ-ಪ್ರತಿವಾದದ ಬಳಿಕ ಮುತಾಲಿಕ್ ಅವರನ್ನು ಗಡಿ ದಾಟಿಸಿದ್ದು ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಎಂಎಲ್‌ಎ, ಕಾರ್ಯಕರ್ತರು ದೌಡು: ಮುತಾಲಿಕ್ ಅವರನ್ನು ಪೊಲೀಸರು ತಡೆದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಪ್ರಮುಖರಾದ ದೀನದಯಾಳು, ವಕೀಲ ರಾಜೇಶ್ ಶಾಸ್ತ್ರಿ ಸೇರಿ ಹಲವರು ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಪೊಲೀಸರ ಜತೆಗೆ ಚರ್ಚೆ, ವಾಗ್ವಾದವನ್ನೂ ನಡೆಸಿದರು. ಅಂತಿಮವಾಗಿ ಕಾರಿನಲ್ಲೇ ಕುಳಿತು ಊಟ ಮಾಡಿದ ಮುತಾಲಿಕ್, ಬಳಿಕ ರಸ್ತೆಯಲ್ಲೇ ಲವ್ ಜಿಹಾದ್ ಪುಸ್ತಕ ಮತ್ತು ಪೋಸ್ಟರ್ ಬಿಡುಗಡೆ ಮಾಡಿದರು.
ಜಿಲ್ಲೆಯ ಗಡಿವರೆಗೆ ಎಸ್ಕಾರ್ಟ್: ಮುತಾಲಿಕ್ ಕಾರಿಗೆ ಶಿವಮೊಗ್ಗದಿಂದ ಡಿವೈಎಸ್‌ಪಿ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿತ್ತು. ತಡರಾತ್ರಿಯೇ ಪೊಲೀಸರು ಮುತಾಲಿಕ್ ಅವರನ್ನು ಜಿಲ್ಲೆಯ ಗಡಿ ದಾಟಿಸಿದ್ದು, ಎನ್.ಆರ್.ಪುರಕ್ಕೆ ಕರೆದೊಯ್ದು ಬಿಡಲಾಗಿದೆ. ಮುತಾಲಿಕ್ ಅವರನ್ನು ತಡೆದ ಸ್ಥಳದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದ್ದಿದ್ದರಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಯಾವ ಪುಸ್ತಕ ಬಿಡುಗಡೆ?
ಶ್ರೀರಾಮ ಸೇನೆಯಿಂದ ಪ್ರಕಟಿಸಿರುವ ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಶುಕ್ರವಾರ ಸಂಜೆ
ಆಗಮಿಸುತ್ತಿದ್ದರು. ನಗರದ ಪತ್ರಿಕಾಭವನದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿತ್ತು. ಬಳಿಕ ಶುಭಂ
ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ನಂತರ ಪ್ರಮೋದ್ ಮುತಾಲಿಕ್ ಭದ್ರಾವತಿಯ ಕಾರ್ಯಕ್ರಮದಲ್ಲಿ
ಭಾಗವಹಿಸಬೇಕಿತ್ತು.
ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?
ಪ್ರಬಲ ಹಿಂದು ಧರ್ಮದ ಪ್ರತಿಪಾದಕರಾಗಿರುವ ಪ್ರಮೋದ್ ಮುತಾಲಿಕ್ ಇನ್ನೊಂದು ಧರ್ಮದ ಬಗ್ಗೆ ದ್ವೇಷ, ವೈಷಮ್ಯ ಹುಟ್ಟಿಸುವಂತೆ
ಭಾಷಣ ಮಾಡುತ್ತಾರೆ. ಅವರ ವಿರುದ್ಧ ರಾಜ್ಯದ ವಿವಿಧೆಡೆ 30 ಪ್ರಕರಣಗಳಿವೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುತಾಲಿಕ್
ಅವರ ಶಿವಮೊಗ್ಗ ಪ್ರವೇಶ ನಿರ್ಬಂಧಿಸಬೇಕೆಂದು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಮುತಾಲಿಕ್ ಅವರ
ಶಿವಮೊಗ್ಗ ಪ್ರವೇಶ ಪ್ರತಿಬಂಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದರು.