

ಹುಬ್ಬಳ್ಳಿ: ಆರ್ಥಿಕ ಹಿಂದುಳಿದವರಿಗೆ ಆರೋಗ್ಯ ಭಾಗ್ಯ ಲಭಿಸಲಿ ಎನ್ನುವ ಉದ್ದೇಶ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರದು. ಹಾಗಾಗಿಯೇ ತಮ್ಮ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಕಳೆದ 20 ವರ್ಷಗಳಿಂದ ಜನರ ಆರೋಗ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಅಭಿಪ್ರಾಯಪಟ್ಟರು.
ಕ್ಷಮತಾ ಸೇವಾ ಸಂಸ್ಥೆ, ಡಾ.ಎಂ.ಎಂ. ಜೋಶಿ ನೇತ್ರಾ ವಿಜ್ಞಾನ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಶ್ರೀ ಸದ್ಗುರು ಶ್ರೀ ಗುರುಪಾದೇಶ್ವರ ಮಠದ ಆಶ್ರಯದಲ್ಲಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಎಂ.ಎಂ. ಜೋಶಿ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಭಾರತದಲ್ಲಿ 12 ಮಿಲಿಯನ್ ಜನರು ಗ್ಲಾಕೋಮಾದಿಂದ ಬಳಲುತ್ತಿದ್ದಾರೆ. ಅಂಧತ್ವ ಉಂಟಾದ ಮೇಲೆ ಪರಿಹಾರಕ್ಕೆ ಪರದಾಡುವ ಬದಲು ಜಾಗೃತರಾಗುವ ಅಗತ್ಯವಿದೆ ಎಂದರು.
ಶಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಸ್ವಾಗತಿಸಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ಶಿಬಿರದಲ್ಲಿ ಸುಮಾರು 250 ಜನರ ಕಣ್ಣು ತಪಾಸಣೆ ಮಾಡಿ, 50 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಉಳಿದವರಿಗೆ ಕಣ್ಣಿನ ಬಗ್ಗೆ ಇರುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಯಿತು.
ಪ್ರಮುಖರಾದ ಮಲ್ಲಪ್ಪ ಅಣ್ಣಿಗೇರಿ, ನಿರ್ಮಲಾ ಚೌಡಶೆಟ್ಟಿ, ರೇಣುಕಾ ದೊಡ್ಡ ಉಡಚಪ್ಪನವರ, ಗಿರಿಜವ್ವ ಯರಗುಪ್ಪಿ, ಶಿರಗುಪ್ಪಿ ಪ್ರಾಥಮಿಕ ಪತ್ತಿನ ಸಂಘದ ಅಧ್ಯಕ್ಷ ಗುರುಪಾದಪ್ಪ ಮೆಣಸಿನಕಾಯಿ ಇತರರು ಇದ್ದರು. ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮುರಳೀಧರ ಮಳಗಿ ನಿರೂಪಿಸಿದರು. ಮೃತ್ಯುಂಜಯ ಹಿರೇಮಠ ವಂದಿಸಿದರು.