ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ 96 ನಂದಘರ್​ಗಳ ನಿರ್ಮಾಣ

NANDAGHARA NEW
Published on

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸಿಎಸ್​ಆರ್ ಯೋಜನೆಯಡಿ 5 ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಒಟ್ಟು 96 ಅಂಗನವಾಡಿ ಕೇಂದ್ರಗಳನ್ನು ಸುಸಜ್ಜಿತ ನಂದಘರ್ ಕೇಂದ್ರಗಳನ್ನಾಗಿ ನವೀಕರಿಸಿದ ಜತೆಗೆ 10 ಅಂಗನವಾಡಿ ಹಾಗೂ ಸಂಸತ್ ಪ್ರದೇಶ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ 9 ಅಂಗನವಾಡಿ ಕಟ್ಟಡಗಳಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ವೇದಾಂತ ಕಂಪನಿಯ ಹಾಗೂ ಎನ್.ಎಂ.ಡಿ.ಸಿ.ಯ ಸಿಎಸ್​ಆರ್ ಯೋಜನೆ ಅಡಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ನಂದಘರ್​ನಲ್ಲಿ ಮಕ್ಕಳಿಗೆ ಆಸನಗಳ ವ್ಯವಸ್ಥೆ, ಸೌರಶಕ್ತಿಯಾಧಾರಿತ ವಿದ್ಯುತ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ವ್ಯವಸ್ಥೆ, ಸ್ವಚ್ಛ ಶೌಚಾಲಯ, ಸ್ಮಾರ್ಟ್ ಟಿ. ವಿ. ಮೂಲಕ ‘ಇ-ಕಲಿಕೆ’ ವ್ಯವಸ್ಥೆ, ಆಟಿಕೆ ಸಾಮಗ್ರಿಗಳು ಹೀಗೆ ವಿವಿಧ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಆಧಾರಿತ ಕಲಿಕೆ ಸೇರಿದಂತೆ ಮಕ್ಕಳಿಗೆ ಇನ್ನಿತರ ಶೈಕ್ಷಣಿಕ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಕ್ಷೇತ್ರದಲ್ಲಿ ಶಿತಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತೆರವುಗೊಳಿಸಿ ಆಧುನಿಕ ಸೌಲಭ್ಯಗಳೊಂದಿಗೆ ಹೊಸದಾಗಿ ಒಟ್ಟು 5 ನಂದಘರ್ ಕೇಂದ್ರಗಳನ್ನು ಶಿಗ್ಗಾಂವ ತಾಲೂಕಿನ ಹಿರೆಬೆಂಡಿಗೇರಿ, ಸವಣೂರು ಪಟ್ಟಣದಲ್ಲಿ, ಕುಂದಗೋಳ ತಾಲೂಕಿನ ಗುಡೇನಕಟ್ಟಿ, ನವಲಗುಂದ ತಾಲೂಕಿನ ಮೊರಬ ಹಾಗೂ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮಗಳಲ್ಲಿ ನಿರ್ವಿುಸಲಾಗಿದೆ ಎಂದು ವಿವರಿಸಿದ್ದಾರೆ.

91 ಅಂಗನವಾಡಿ ಕೇಂದ್ರಗಳನ್ನು ನವೀಕರಿಸಲಾಗಿದ್ದು, ನಂದಘರ್​ಗಳನ್ನಾಗಿ ಪರಿವರ್ತಿಸಲಾಗಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 19, ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 16, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 15, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ 21, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ಹಾಗೂ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ 12 ಅಂಗನವಾಡಿ ಕೇಂದ್ರಗಳನ್ನು ಸುಸಜ್ಜಿತ ನಂದಘರ್​ಗಳನ್ನಾಗಿ ಪರಿವರ್ತಿಸಲಾಗಿದೆ.

ಎನ್.ಎಂ.ಡಿ.ಸಿ. ಕಂಪನಿ ಸಿಎಸ್​ಆರ್ ಯೋಜನೆ ಅಡಿ 1.13 ಕೋಟಿ ರೂ. ವೆಚ್ಚದಲ್ಲಿ ಒಟ್ಟು 10 ಅಂಗನವಾಡಿಗಳನ್ನು ಧಾರವಾಡ ಜಿಲ್ಲೆಯಲ್ಲಿ ನಿರ್ವಿುಸಿದೆ. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ 9 ಅಂಗನವಾಡಿಗಳನ್ನು ಕಲಘಟಗಿ, ಕುಂದಗೋಳ, ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕುಗಳಲ್ಲಿ ನಿರ್ವಿುಸಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net