ಲಕಮಾಪುರದಲ್ಲಿ ಪ್ರಲ್ಹಾದ ಜೋಶಿ ಚುನಾವಣೆ ಪ್ರಚಾರ

Lakamapur Joshi New
Published on

ಹುಬ್ಬಳ್ಳಿ : ಭಾರತ ಆಮದು ಮಾಡಿಕೊಳ್ಳುವ ಕಾಲ 2014ಕ್ಕೇ ಮುಗಿದಿದೆ. ಇನ್ನೇನಿದ್ದರೂ ಸ್ವಾವಲಂಬಿ ದೇಶ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡ ಸಮೀಪದ ಲಕಮಾಪುರದಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆ ಇಂದು ಸಾಕಾರಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು.

ಹಿಂದೊಂದು ಕಾಲವಿತ್ತು. ಏನೇ ಬೇಕಿದ್ದರೂ ನಾವು ಪರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಆದರೆ, ಮೋದಿ ಅವರು ಪ್ರಧಾನಿಯಾದ ಮೇಲೆ ಆಮದು ಸಂಸ್ಕೃತಿಗೆ ಅಂತ್ಯ ಹಾಡುತ್ತಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಭಾರತವನ್ನು ‘ಮೇಕ್ ಇನ್ ಇಂಡಿಯಾ : ಮೇಡ್ ಇನ್ ಇಂಡಿಯಾ‘ ಆಗಿ ಪರಿವರ್ತಿಸುತ್ತಿದ್ದಾರೆ. ಆತ್ಮನಿರ್ಭರ ಮೂಲಕ ದೇಶವನ್ನು ಸಂಪೂರ್ಣ ಸ್ವಾವಲಂಬಿಯಾಗಿ ಮಾಡುತ್ತಿದ್ದಾರೆ ಎಂದರು.

ಆಮದು ನೀತಿಗೆ ಮಹತ್ವ ಕೊಡುತ್ತಿದ್ದ ಕಾಲ 2014 ಕ್ಕೇ ಮುಗಿಯಿತು. ಮೋದಿ ಪ್ರಧಾನಿಯಾದ ಮೇಲೆ ದೇಶದ ಸಂಪತ್ತಿನಿಂದಲೇ, ದೇಶವಾಸಿಗಳಿಂದಲೇ ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಮನಗಂಡು ಅದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಆತ್ಮನಿರ್ಭರ ಅಭಿಯಾನದಡಿ ಕುಶಲಕರ್ವಿುಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದರು.

ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುವ ಹಂತಕ್ಕೆ ನಾವು ಬೆಳೆದಿದ್ದೇವೆ. ಅಮೇರಿಕಾ ಅಧ್ಯಕ್ಷರು ಮೋದಿಯವರಿಗೆ ಕರ್ನಾಟಕದ ಸಿರಿಧಾನ್ಯಗಳ ರಸದೌತಣ ನೀಡಿದ್ದರು ಎಂದು ಜೋಶಿ ನೆನಪಿಸಿದರು.

ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಸಂಪನ್ಮೂಲ ನಮ್ಮಲ್ಲೇ ಸಾಕಷ್ಟಿದ್ದರೂ ಬರೀ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ, ಮೋದಿಯವರ ಸೂಚನೆ ಮೇರೆಗೆ ಕಲ್ಲಿದ್ದಲು ಆಮದನ್ನು ಸಂಪೂರ್ಣ ನಿಲ್ಲಿಸಲು ಯೋಜನೆ ಹೊಂದಿದ್ದೇವೆ ಎಂದು ಜೋಶಿ ತಿಳಿಸಿದರು.

ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮುಖಂಡರಾದ ಸವಿತಾ ಅಮರಶೆಟ್ಟಿ, ಗುರು ಗೌಡ್ರ, ಸುನೀಲ ಗುಡಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net