ತೋಳನಕೆರೆ ಪಾರ್ಕ್​ನಲ್ಲಿ ಪ್ರಲ್ಹಾದ ಜೋಶಿ ಚುನಾವಣೆ ಪ್ರಚಾರ

JOshi Tolanakere New
Published on

ಹುಬ್ಬಳ್ಳಿ : ಕಳೆದ ಒಂದು ದಶಕದಲ್ಲಿ ಧಾರವಾಡ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾಗಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.

ನಗರದ ತೋಳನಕೆರೆ ಪಾರ್ಕ್​ನಲ್ಲಿ ಶನಿವಾರ ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿ, ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ, ಕಿಮ್ಸ್ ಕಟ್ಟಡ, ವಿಮಾನ ನಿಲ್ದಾಣ, ಮಲಪ್ರಭಾ ಕುಡಿಯುವ ನೀರು ಪೂರೈಕೆ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಧಾರವಾಡ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಈ ಭಾಗದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ತರುವುದು ನನ್ನ ಗುರಿ ಮತ್ತು ಜವಾಬ್ದಾರಿಯಾಗಿದೆ. ಇದರಲ್ಲಿ ಕಾಂಗ್ರೆಸ್​ನವರಂತೆ ರಾಜಕಾರಣ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಧಾರವಾಡ ಕ್ಷೇತ್ರ ಕಳೆದೊಂದು ದಶಕದಿಂದ ಅಭಿವೃದ್ಧಿಯ ವೇಗ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದ ಪ್ರಲ್ಹಾದ ಜೋಶಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಭಿವೃದ್ಧಿ ಚುರುಕುಗೊಳಿಸಿ ದೇಶವನ್ನು ಜಾಗತಿಕವಾಗಿ ಗುರುತಿಸಿದ್ದಾರೆ. ದೇಶಕ್ಕಾಗಿ ಮೋದಿ ಅವರ ಕೈ ಬಲಪಡಿಸಲು ಮತ್ತೆ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಚನ್ನು ಹೊಸಮನಿ ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net