

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಚಂದ್ರಕಾ0ತ ಬೆಲ್ಲದ ಹಾಗೂ ಶಂಕರ ಹಲಗತ್ತಿ ಅವರ ಬಣಕ್ಕೆ ಅಽಕಾರದ ಹಪಾಹಪಿ ಇದೆ. ಹಿಂದಿನ ಚುನಾವಣೆಯಲ್ಲಿ ಪರಸ್ಪರ ವಿರೋಧಿ ಬಣದಲ್ಲಿದ್ದ ಬೆಲ್ಲದ ಹಾಗೂ ಹಲಗತ್ತಿ ಈ ಬಾರಿ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದು ಇದಕ್ಕೆ ನಿದರ್ಶನ ಎಂದು ಪಾಪು ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ಸ್ಥಾನದ ಸ್ಪರ್ಧಿ ಪ್ರಕಾಶ ಉಡಿಕೇರಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರಂಪರಿಕ ಕಟ್ಟಡದ ಹೊಂದಿರುವ ಸಂಘದ ಅಭಿವೃದ್ಧಿ ಕಾಮಗಾರಿಯನ್ನು ಬೈಲಾ ಉಲ್ಲಂಘಿಸಿ ಟೆಂಡರ್ ಕರೆಯದೆ ತಮಗೆ ಬೇಕಾದರವರಿಗೆ ನೀಡಲಾಗಿದೆ. ಸಂಘದ ಆಡಳಿತ ಮಂಡಳಿ ವಿಶೇಷ ಅನುದಾನ ತಂದಿಲ್ಲ. ಮತ್ತೊಮ್ಮೆ ಅವಕಾಶ ನೀಡಿ ಎಂದು ಕೋರುತ್ತಿರುವುದು ದಾರಿ ತಪ್ಪಿಸುವಂತ ತಂತ್ರ. ಮತದಾರರು ಹಿಂದಿನ ಆಡಳಿತ ಮಂಡಳಿಯನ್ನು ಸಂಪೂರ್ಣ ಬದಲಿಸಿ ಪಾಠ ಕಲಿಸಬೇಕು ಎಂದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ಮಾತನಾಡಿ, ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪ ಅವರು 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ರಾಜಕಾರಣಿಗಳೇ ಬೇರೆ, ರಾಜಕೀಯವೇ ಬೇರೆ. ಸಂಘದ ಅಭಿವೃದ್ಧಿ, ಸದಸ್ಯತ್ವ ಅಭಿಯಾನ, ಕಲೆ, ಸಾಹಿತ್ಯ, ಸಂಗೀತದ ಬೆಳವಣಿಗೆ, ಕಲಾವಿದರಿಗೆ ಪ್ರೋತ್ಸಾಹ, ಪಾರದರ್ಶಕ ಆಡಳಿತಕ್ಕೆ ಪಾಪು ಅಭಿಮಾನಿ ಬಳಗವನ್ನು ಬೆಂಬಲಿಸಬೇಕು ಎಂದು ಕೋರಿದರು.
ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ಪಾಪು ಬಣದ ಡಾ. ಶರಣಪ್ಪ ಕೊಟಗಿ, ಮಾರ್ತಾಂಡಪ್ಪ ಕತ್ತಿ, ಡಾ. ವಿಶ್ವನಾಥ ಚಿಂತಾಮಣಿ, ಡಾ. ರತ್ನಾ ಐರಸಂಗ, ಸಂತೋಷ ಪಟ್ಟಣಶೆಟ್ಟಿ, ಪ್ರಭು ಕುಂದರಗಿ, ಎಸ್.ಎಂ. ದಾನಪ್ಪನವರ, ವಿಶ್ವನಾಥ ಅಮರಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.