ನಿಸ್ವಾರ್ಥ ದಾನದಿಂದ ಪ್ರಕಾಶ್ ಶೆಟ್ಟಿ ಬದುಕು ಸಾರ್ಥಕ - ಚಿತ್ರನಟ ರಮೇಶ್ ಅರವಿಂದ್ ಶ್ಲಾಘನೆ

mng-25dec-prakash shetty
Published on



ಮಂಗಳೂರು : ಕಾಯಕದಲ್ಲಿ ಉತ್ಕೃಷ್ಟತೆ , ಜನರಲ್ಲಿ ವಿಶ್ವಾಸಾರ್ಹತೆ ಜತೆಗೆ ಪರರ ಹಿತ ಬಯಸಿದರೆ ವ್ಯಕ್ತಿ ಸಮಾಜದಲ್ಲಿ ಉತ್ತುಂಗದ ಸ್ಥಾನಕ್ಕೆ ಏರುತ್ತಾನೆ. ಇಂತಹ ಶ್ರೇಷ್ಠ ಗುಣಗಳನ್ನು ಅಳವಡಿಸಿ ಕೊಂಡಿರುವ ಉದ್ಯಮಿ ಪ್ರಕಾಶ್ ಶೆಟ್ಟಿ ಅವರು ತನ್ನ ನಿಸ್ವಾರ್ಥ ದಾನದಿಂದ ಬದುಕಿನಲ್ಲಿ ಸಾರ್ಥಕತೆ ಕಂಡಿದ್ದಾರೆ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು.
ನಗರದ ಗೋಲ್ಡ್ಫಿಂಚ್ ಸಿಟಿಯಲ್ಲಿ ಸೋಮವಾರ ನಡೆದ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಪ್ರದಾನ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ಇನ್ನೊಬ್ಬರಿಗೆ ಸಹಾಯ ಮಾಡುವುದೇ ಬದುಕಿನ ಬಹುದೊಡ್ಡ ಗೆಲುವು. ಕಷ್ಟ ತೋಡಿಕೊಂಡವರಿಗೆ ಮನಪೂರ್ವಕವಾಗಿ ನೆರವು ನೀಡುವ ಮೂಲಕ ಪ್ರಕಾಶ್ ಶೆಟ್ಟಿ ಅವರು ಅಸಹಾಯಕರ ಮನ ಗೆದ್ದಿದ್ದಾರೆ ಎಂದರು.
ಪ್ರಕಾಶ್ ಶೆಟ್ಟಿ ಹೆಸರಿನಂತೆ ಅವರ ಜೀವನ ಕೂಡಾ ಪ್ರಕಾಶಮಾನವಾಗಿದೆ. ಮನಸ್ಸುಗಳನ್ನು ಗೆಲ್ಲುವ ಪಯಣ ಅವರ
ಮುಂದುವರಿಯಲಿ. ಅವರಿಂದ ನೆರವು ಪಡೆದವರು ಬದುಕಿನಲ್ಲಿ ಸದೃಢರಾಗಬೇಕು. ಇನ್ನೊಬ್ಬರಿಗೆ ನೆರವಾಗುವ ಹಂತಕ್ಕೆ
ಬೆಳೆಯಬೇಕೆಂದು ರಮೇಶ್ ಅರವಿಂದ್ ಹಾರೈಸಿದರು.
*ಸಮಗ್ರ ಸಮಾಜದ ಪರಿಕಲ್ಪನೆ
ಸಮಗ್ರ ಸಮಾಜದ ಪರಿಕಲ್ಪನೆಯಡಿ ಪ್ರಕಾಶ ಶೆಟ್ಟಿ ಅವರು ಭಾಷೆ,ಜಾತಿ,ಮತ, ಧರ್ಮವನ್ನು ಮೀರಿ ಮಾನವೀಯ ನೆಲೆಗಟ್ಟಿನಲ್ಲಿ ಕಡುಬಡವರಿಗೆ , ಆಶಕ್ತರಿಗೆ ನೆರವಾಗುತ್ತಿದ್ದಾರೆ. ತನ್ನ ಸಂಪಾದನೆಯ ಒಂದು ಭಾಗವನ್ನು ದಾನವಾಗಿ ನೀಡುತ್ತಿರುವ ಅವರ
ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
*ಗೋಲ್ಡ್‌ಫಿಂಚ್ ಟೌನ್‌ಶಿಪ್ :
ಎಂಆರ್‌ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ ‘ ಬಡತನ, ಕತ್ತಲಿನ ಹಾದಿಯಲ್ಲಿ ಸಾಗಿಬಂದವನು ದೇವರು ಅನುಗ್ರಹದಿಂದ ಬೆಳಕು ಕಾಣುವಂತಾಯಿತು. ಹಂತಹಂತವಾಗಿ ಬದುಕಿನಲ್ಲಿ ಯಶಸ್ಸು ಕಂಡು 60ನೇ ಹುಟ್ಟುಹಬ್ಬದ ಸಲುವಾಗಿ ಅಶಕ್ತರಿಗೆ 1.25 ಕೋಟಿ ರೂ. ನೆರವು ನೀಡಿದೆ. ಈ ವರ್ಷ 4 ಕೋಟಿ ರೂ.ನೆರವು ನೀಡುವ ಶಕ್ತಿ ಬಂದಿದೆ. ನನ್ನ ಕುಟುಂಬದವರು ಇದನ್ನು ಮಂದುವರಿಸಿಕೊಂಡು ಹೋಗಬೇಕೆನ್ನುವುದು ನನ್ನ ಆಶಯವಾಗಿದೆ’ಎಂದರು.
ಪ್ರತೀ ವರ್ಷ ನೆರವು ಕಾರ್ಯದಿಂದ ಗೋಲ್ಡ್ಫಿಂಚ್ ಸಿಟಿ ಪುಣ್ಯ ಭೂಮಿಯಾಗಿದೆ. ಭವಿಷ್ಯದಲ್ಲಿ ಬೃಹತ್ ಟೌನ್‌ಶಿಪ್ ಈ ಜಾಗದಲ್ಲಿ ತಲೆ ಎತ್ತಲಿದೆ. ಆಸ್ಪತ್ರೆ, ಶಾಲೆ, ಮಾಲ್, ಹೋಟೆಲ್, ವೃದ್ಧಾಶ್ರಮ, ಐಟಿ ಪಾರ್ಕ್ ಮುಂತಾದ ಯೋಜನೆಗಳನ್ನು ಈ ಟೌನ್‌ಶಿಪ್ ಒಳಗೊಳ್ಳಲಿದೆ. ಟೌನ್‌ಶಿಪ್‌ನಿಂದ ಬರುವ ಆದಾಯದ ಒಂದು ಭಾಗವನ್ನು ಕೂಡಾ ಬಡವರಿಗೆ ನೆರವಾಗಲು ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದರು.
ಎಂಆರ್‌ಜಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net