ಪ್ರಕಾಶ್‌ಚಂದ್ರ ಶೆಟ್ಟಿಗೆ ಅತ್ಯುತ್ತಮ ಹೈನುಗಾರ ಪ್ರಶಸ್ತಿ

prakash
Published on

ನರಸಿಂಹ ನಾಯಕ್ ಬೈಂದೂರು

ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ದ.ಕ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಂಗಳವಾರ ಬೆಂಗಳೂರು ಜಿಕೆವಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಗತಿಪರ ಹೈನುಗಾರರ ತಾಂತ್ರಿಕ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪಶುಸಂಗೋಪನಾ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು.

ಸಹಕಾರಿ ಕ್ಷೇತ್ರಕ್ಕೆ ಮಾನವೀಯ ಮೌಲ್ಯ ತಂದುಕೊಟ್ಟ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಪದವಿ ಪೂರ್ಣಗೊಳಿಸಿದರೂ ಸರ್ಕಾರಿ ನೌಕರಿಯತ್ತ ಆಸಕ್ತಿ ವಹಿಸದೆ ಕೃಷಿಕರಾಗಿ ಭತ್ತ, ತೆಂಗು, ಅಡಿಕೆ, ಕಾಳುಮೆಣಸು ಮತ್ತಿತರ ಬೆಳೆಗಳನ್ನು ಸಾವಯವ ಗೊಬ್ಬರ ಬಳಸಿ ವೈಜ್ಞಾನಿಕ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಈ ಮೂಲಕ ಕೃಷಿ ಕ್ಷೇತ್ರ ಅಭಿವೃದ್ಧಿಗೊಳಿಸಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ 2017-18ನೇ ಸಾಲಿನಲ್ಲಿ ಜಿಲ್ಲಾ ಕೃಷಿಕ ಪ್ರಶಸ್ತಿ, ಸಹಕಾರಿ ಇಲಾಖೆಯಿಂದ ಇತ್ತೀಚೆಗೆ ರಾಜ್ಯಮಟ್ಟದ ಸಹಕಾರರತ್ನ ರಾಜ್ಯ ಪ್ರಶಸ್ತಿ ದೊರೆತಿದೆ.

1998ರಿಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಅವರು ನಿರಂತರ 25 ವರ್ಷ ಸಂಘ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇಂದು ಉಭಯ ಕರಾವಳಿ ಜಿಲ್ಲೆಯ ಅಗ್ರಗಣ್ಯ ಸಹಕಾರಿ ಸಂಘವಾಗಿ, ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಖಂಬದಕೋಣೆ ಮಂಡಲ ಪಂಚಾಯಿತಿ ಸದಸ್ಯರಾಗಿದ್ದ ಅವರು ಒಂದು ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತದಿಂದ ಜನಮನ್ನಣೆ ಗಳಿಸಿದ್ದರು. 2011ರಲ್ಲಿ ಪ್ರಥಮ ಬಾರಿ ಪತ್ತಿನ ಸಹಕಾರ ಸಂಘವೊಂದು ಒಂದು ಕೋಟಿ ರೂ.ಗೂ ಹೆಚ್ಚಿನ ಲಾಭಗಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

2017ರಲ್ಲಿ ಸಂಘದ ಪ್ರಧಾನ ಕಚೇರಿ ರಚಿಸಲಾಗಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಬಳಸಿ ಸಂಘದ ಕಾರ್ಯಕ್ಷೇತ್ರದ 9 ಗ್ರಾಮಗಳ ರೈತರಿಗೆ ಸಹಿತ ಸಮಗ್ರ ಬೈಂದೂರು ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಕೆರ್ಗಾಲು ಗ್ರಾಮದ ರಾಷ್ಟ್ರೀಯ ಹೆದ್ದರಿಯ ಪಕ್ಕದಲ್ಲಿ ಸರಕಿನ ಕೃಷಿ ಮಳಿಗೆ, ಸವಲತ್ತುಗಳ ಸಂಕೀರ್ಣ ಸ್ಥಾಪಿಸುವ ಯೋಜನೆ ಚಾಲನೆಯಲ್ಲಿದೆ. ಇಂತಹ ಯೋಜನೆಗಳಿಂದ ಸಹಕಾರಿ ಕ್ಷೇತ್ರಕ್ಕೆ ಜನಮನ್ನಣೆ ದೊರಕಿಸುವಲ್ಲಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ.

1.06 ಲಕ್ಷ ಲೀ. ಹಾಲು ಪೂರೈಕೆ

ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಎಸ್. ಪ್ರಕಾಶ್ಚಂದ್ರ ಶೆಟ್ಟಿ 2023-24ನೇ ಸಾಲಿನಲ್ಲಿ ಒಟ್ಟು 1.06 ಲಕ್ಷ ಲೀ. ಹಾಲು ಪೂರೈಸಿದ್ದಾರೆ. ಜತೆಗೆ ಪ್ರತಿವರ್ಷ ಹಾಲು ಪೂರೈಕೆ ಪ್ರಮಾಣವನ್ನೂ ಹೆಚ್ಚಿಸಿದ್ದಾರೆ. ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ 2022ರಲ್ಲಿ ನೂತನ ಕಟ್ಟಡ, ಸಾಂದ್ರಶಿತಲೀಕರಣ ಘಟಕ ಆರಂಭಿಸುವಲ್ಲೂ ಶ್ರಮಿಸಿದ್ದಾರೆ.

ವಿದೇಶಗಳಲ್ಲಿ ಕೃಷಿ ಅಧ್ಯಯನ

ಪ್ರಕಾಶ್ಚಂದ್ರ ಶೆಟ್ಟಿ ಅವರು ಕೃಷಿ, ಹೈನುಗಾರಿಕೆ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ದಕ್ಷಿಣ ಭಾರತ, ಇಸ್ರೇಲ್, ಸಿಂಗಾಪುರ ಮುಂತಾದ ದೇಶ ವಿದೇಶಗಳಲ್ಲಿ ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ಬಳಿಕ ತಮ್ಮ ಅನುಭವಗಳನ್ನು ವಿವಿಧ ರೈತಕೂಟದ ಸದಸ್ಯರಿಗೆ ಕೃಷಿ ಮಾಹಿತಿ ಶಿಬಿರ ಏರ್ಪಡಿಸಿ ತರಬೇತಿ ನೀಡಿದ್ದಾರೆ. ಹೊಸ ಪ್ರಯೋಗಗಳ ಮೂಲಕವೂ ಯಶಸ್ಸು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net