ಸಿದ್ಧೇಶ್ವರ ಬ್ಯಾಂಕ್‌ಗೆ ಬಗಲಿ-ಗೊಬ್ಬೂರ ಸಾರಥ್ಯ

VJP_Siddeshwar Bank
Published on

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ಸಿದ್ಧೇಶ್ವರ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಂದುಕೊಂಡಂತೆ ಅವಿರೋಧ ಆಯ್ಕೆ ನಡೆದಿದೆ.

ನೂತನ ಅಧ್ಯಕ್ಷರಾಗಿ ಪ್ರಕಾಶ ಬಗಲಿ ಹಾಗೂ ಉಪಾಧ್ಯಕ್ಷರಾಗಿ ಬೌರಮ್ಮ ಗೊಬ್ಬೂರ ಆಯ್ಕೆಯಾಗಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯ ಪರಿಪಾಲನೆಯಾಗಿದ್ದು, ಸಿದ್ಧೇಶ್ವರ ಸಂಸ್ಥೆ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ ಎಂಬುದನ್ನು ತೋರಿಸಿಕೊಟ್ಟಂತಾಗಿದೆ.

ಕಳೆದ ನ. 8 ರಂದು 19 ಸ್ಥಾನಗಳ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ 18 ಜನರು ಹಳೇ ಪ್ಯಾನಲ್‌ನವರೇ ಆಯ್ಕೆಯಾಗಿದ್ದರು.ಹೀಗಾಗಿ ಅವಿರೋಧ ಆಯ್ಕೆ ಮೊದಲೇ ಖಚಿತವಾಗಿತ್ತು. ಎಲ್ಲರ ಸಹಮತದ ಮೇರೆಗೆ ಪ್ರಕಾಶ ಬಗಲಿ ಹಾಗೂ ಬೌರಮ್ಮ ಗೊಬ್ಬೂರ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿ ಪಿ.ಬಿ. ಕಾಳಗಿ ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಸದಸ್ಯರು ಹಾಗೂ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ನಿರ್ದೇಶಕ ಮಂಡಳಿಯವರು ಹೂಮಾಲೆ ಹಾಕಿ ಸನ್ಮಾನಿಸಿದರು. ಬಳಿಕ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಿಹಿ ತಿನ್ನಿಸಿ, ಗುಲಾಲು ಎರಚಿ ಬೆಂಬಲಿಗರು ಸಂಭ್ರಮಿಸಿದರು. ಹಿರಿತನದ ಆಧಾರ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲೆ ಆಯ್ಕೆ ಪ್ರಕ್ರಿಯೆ ನಡೆದಿದ್ದಕ್ಕೆ ಆಡಳಿತ ಮಂಡಳಿ ಪರ ಸಾಕಷ್ಟು ಮೆಚ್ಚುಗೆ ಮಾತು ಕೇಳಿ ಬಂದವು.

ಸಿದ್ಧೇಶ್ವರ ಬ್ಯಾಂಕ್ ಜಿಲ್ಲೆಯ ಹೆಮ್ಮೆ. ಅಂಥದರಲ್ಲಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿದ್ದು ಮತ್ತಷ್ಟು ಹೆಮ್ಮೆ ತರಿಸಿದೆ. ಬ್ಯಾಂಕ್ ಬೆಳವಣಿಗೆಗೆ ಶಕ್ತಿ ಮೀರಿ ಪ್ರಯತ್ನಿಸುವೆ. ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುವೆ.

ಪ್ರಕಾಶ ಬಗಲಿ, ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net