ಇತಿಹಾಸ ಪುಟ ಸೇರಿದ ಪೇಪರ್ ಪ್ರಕಾಶಣ್ಣನ ಅಂಗಡಿ

prakash
Published on

ಮಡಿಕೇರಿ:

ಜಿಲ್ಲೆಯ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಸಮಯದಿಂದ ಪತ್ರಿಕಾ ಓದುಗರ ಜ್ಞಾನ ದಾಹ ತಣಿಸುತ್ತಿದ್ದ ಅಂಗಡಿಯೊAದು ಅಕ್ಷರಶಃ ಇತಿಹಾಸ ಪುಟ ಸೇರಿದೆ. ಶ್ರೀ ಗಣಪತಿ ದೇವಾಲಯಕ್ಕೆ ಸೇರಿದ ವಾಣಿಜ್ಯ ಸಂಕೀರ್ಣ ನೆಲಸಮ ಮಾಡುತ್ತಿದ್ದು, ಇಲ್ಲಿದ್ದ 'ಪೇಪರ್ ಪ್ರಕಾಶಣ್ಣನ ಅಂಗಡಿ'ಯೂ ನೆನಪಿನ ಪುಟ ಸೇರುತ್ತಿದೆ. ತಮ್ಮ ವೃತ್ತಿ ಮುಂದುವರಿಸಲು ಸೂಕ್ತ ಸ್ಥಳಾವಕಾಶ ಸಿಗದೆ 'ಪೇಪರ್ ಪ್ರಕಾಶಣ್ಣ' ಕಂಗಾಲಾಗಿದ್ದಾರೆ.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ದೇಶದ ಬಹುತೇಕ ಎಲ್ಲಾ ಭಾಷೆಗಳ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತಿತರ ನಿಯತಕಾಲಿಕೆಗಳನ್ನು ಮಾರುತ್ತಿದ್ದ ಕುಶಾಲನಗರದ 'ಪೇಪರ್ ಪ್ರಕಾಶಣ್ಣನ ಅಂಗಡಿ' ಗುರುವಾರದಿಂದ (ಜ.23) ಬರೀ ನೆನಪಾಗಿ ಉಳಿಯಲಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಇವರಿದ್ದ ಮಳಿಗೆ ಸೇರಿದಂತೆ ಶ್ರೀ ಗಣಪತಿ ದೇವಾಲಯ ಸಮಿತಿಗೆ ಸೇರಿದ ವಾಣಿಜ್ಯ ಸಂಕೀರ್ಣವನ್ನು ನೆಲಸಮ ಮಾಡುತ್ತಿದ್ದು, ಈ ತನಕ ಆಶ್ರಯ ಪಡೆದುಕೊಂಡಿದ್ದ ಜಗುಲಿಯನ್ನೂ ಖಾಲಿ ಮಾಡಬೇಕಾಗಿದೆ.

ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಈಗಿರುವ ಕಟ್ಟಡವನ್ನು ಒಡೆಯುವ ಕಾರಣ ನೀಡಿ 2018ರ ಡಿ.20ರಂದು 'ಪೇಪರ್ ಪ್ರಕಾಶಣ್ಣ' ಸೇರಿದಂತೆ ಆ ವಾಣಿಜ್ಯ ಸಂಕೀರ್ಣದಲ್ಲಿ ಇದ್ದ ಅಂಗಡಿಗಳನ್ನು ಖಾಲಿ ಮಾಡಿಸಿ ದೇವಾಲಯ ಸಮಿತಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದರೂ 'ಪೇಪರ್ ಪ್ರಕಾಶಣ್ಣ' ತಾವಿದ್ದ ಮಳಿಗೆಯ ಜಗಲಿಯಲ್ಲೇ ತಮ್ಮ ಕಾಯಕ ಮುಂದುವರಿಸಿದ್ದರು. ಇದೀಗ ಕಟ್ಟಡ ನೆಲಸಮ ಮಾಡಲು ಕಾಲ ಕೂಡಿಬಂದಿರುವುದರಿAದ ಸುಮಾರು ಅರ್ಧ ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಈ ಕಟ್ಟಡದ ಜತೆಗೆ ಇಟ್ಟುಕೊಂಡಿದ್ದ ಬಾಂಧವ್ಯವನ್ನು ಇವರೂ ಕಳಚಿಕೊಳ್ಳುವ ಅನಿವಾರ್ಯತೆ ಬಂದಿದೆ.

ಇಷ್ಟರ ತನಕ ಅನ್ನ ಕೊಟ್ಟಿದ್ದ ಸ್ಥಳದಿಂದ ಹೊರಬೀಳುತ್ತಿರುವ ನೋವು 'ಪ್ರಕಾಶಣ್ಣ'ನ ಎದೆಯಲ್ಲಿ ಮಡುಗಟ್ಟಿದೆ. ಆದರೂ ಪತ್ರಿಕಾ ವಿತರಣೆಯ ಜವಾಬ್ದಾರಿಯನ್ನು ಮರೆತಿಲ್ಲ. ನೋವಿನ ಮಧ್ಯೆಯೂ ಪತ್ರಿಕೆಗಳನ್ನು ಓದುಗರಿಗೆ ಮುಟ್ಟಿಸುವ ಕರ್ತವ್ಯವನ್ನು ಎಂದಿನAತೆ ಗುರುವಾರವೂ ಎಂದಿನAತೆ ನಿಭಾಯಿಸುತ್ತಿದ್ದರು. ತಮ್ಮ 'ಪ್ರಕಾಶ್ ನ್ಯೂಸ್ ಏಜೆನ್ಸಿ'ಗೆ ಬೇರೊಂದು ಕಡೆ ಜಾಗಕ್ಕಾಗಿ ಈತನಕ ಪ್ರಯತ್ನಿಸಿದ್ದರೂ ಫಲ ಸಿಗದ ಬೇಸರವೂ ಅವರಲ್ಲಿದೆ. ಕುಶಾಲನಗರ ಪುರಸಭೆ, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಸಂಪರ್ಕಿಸಿ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಈಗಲಾದರೂ ತಮ್ಮ ಬೇಡಿಕೆಗೆ ಸ್ಪಂದನೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಪ್ರಕಾಶಣ್ಣ ಇದ್ದಾರೆ.

ಹವಾಯಿ ಚಪ್ಪಲಿ, ಹಳೇ ಸೈಕಲ್, ತಲೆಗೊಂದು ಟೋಪಿ ಹಾಕಿಕೊಂಡು ಕೊಡಗಿನ ಮಳೆ-ಚಳಿಯಲ್ಲೂ ಬೆಳ್ಳಂಬೆಳಗ್ಗೆ 'ಪ್ರಕಾಶಣ್ಣ' ಪತ್ರಿಕೆ ಹಂಚಲು ಹೊರಟರೆಂದರೆ ಯುವಕರೇ ನಾಚುತ್ತಿದ್ದರು. ಇತ್ತೀಚೆಗೆ ಕಾಲಿಗೆ ಏಟು ಮಾಡಿಕೊಂಡಿದ್ದರೂ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ಸಮೀಪದ ಚಂದಾದಾರರಿಗೆ ಪತ್ರಿಕೆ ತಲುಪಿಸುವುದು, ತಿಂಗಳ ಬಿಲ್ ವಸೂಲಿ ಮಾಡುವುದನ್ನು 'ಪ್ರಕಾಶಣ್ಣ' ಈಗಲೂ ಮುಂದುವರಿಸಿಕೊAಡು ಬಂದಿದ್ದಾರೆ. ಕುಶಾಲನಗರದ ಅಷ್ಟೂ ಮನೆಗಳ ವಿವÀರ, ಯಾವ್ಯಾವ ಮನೆಗೆ ಯಾವ್ಯಾವ ಪತ್ರಿಕೆ ಹಾಕಬೇಕು ಎನ್ನುವುದನ್ನು ಅವರ ಕೈಕೆಳಗಿನ ಹುಡುಗರಿಗಿಂತಲೂ ಚೆನ್ನಾಗಿ ಜ್ಞಾಪಕ ಇಟ್ಟುಕೊಂಡು, ಎಲ್ಲಾ ರೂಟ್‌ಗಳಿಗೂ ಪತ್ರಿಕೆಗಳನ್ನು ಬ್ಯಾಗ್‌ಗಳಿಗೆ ತುಂಬಿಕೊಡುತ್ತಾ 'ಚಳಿ ಆಗುತ್ತೆ ಟೋಪಿ ಹಾಕ್ಕೋಳ್ರೋ' ಎಂದು ಪ್ರೀತಿಯಿಂದ ಗದರಿ ಹುಡುಗರನ್ನು ಕಳುಹಿಸಿಕೊಡುತ್ತ, ಮುಂಜಾನೆಯ ಹೊತ್ತು ಗದ್ದಲದ ಸಂಭ್ರಮದಿAದ ಕೂಡಿರುತ್ತಿದ್ದ 'ಪ್ರಕಾಶಣ್ಣನ ಅಂಗಡಿ' ಜಗುಲಿ ಗುರುವಾರದಿಂದ ನಿಶ್ಯಬ್ದವಾಗಲಿದೆ.

ನಾವಿದ್ದ ಮಳಿಗೆ ಖಾಲಿ ಮಾಡಿದ್ದ ನಂತರ ಇಲ್ಲಿಯ ಜಗುಲಿ ಮೇಲೆಯೇ ನಮ್ಮ ಕೆಲಸ ಮುಂದುವರಿಸಿದ್ದೆವು. ಈಗ ಕಟ್ಟಡ ಒಡೆಯುತ್ತಿರುವುದರಿಂದ ಇಲ್ಲಿಂದಲೂ ಖಾಲಿ ಮಾಡಬೇಕಿದೆ. ಶುಕ್ರವಾರದಿಂದ ಎಲ್ಲಿ ಪತ್ರಿಕೆ ಮಾರುವುದು ಗೊತ್ತಾಗುತ್ತಿಲ್ಲ. ಇಷ್ಟು ವರ್ಷ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಪುರಸಭೆಯವರು ಪುಟ್ಟದೊಂದು ಜಾಗ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು.

- ವಿ.ಪಿ. ಪ್ರಕಾಶ್, ಹಿರಿಯ ಪತ್ರಿಕಾ ವಿತರಕ, ಕುಶಾಲನಗರ

ವಿ.ಪಿ. ಪ್ರಕಾಶ್ ಅವರು ಸ್ಥಳಾವಕಾಶ ಕೋರಿ ಮನವಿ ಮಾಡಿದ್ದಾರೆ. ಸದ್ಯದಲ್ಲೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದೆ. ಈ ವಿಷಯವನ್ನು ಸಭೆಯಲ್ಲಿ ಚರ್ಚೆಗೆ ಇಟ್ಟು ಆಡಳಿತ ಮಂಡಳಿ ಸಲಹೆ ಮೇರೆಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು.

- ಕೃಷ್ಣಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net