ಹೊಳೆನರಸೀಪುರದಲ್ಲಿ ಪ್ರಜ್ವಲ್ ರೇವಣ್ಣ ರೋಡ್ ಶೋ

23
Published on

ಹೊಳೆನರಸೀಪುರ : ನಮ್ಮ ಜಿಲ್ಲೆಯ ಜನರು ಎಂದಿಗೂ ನನ್ನ ಕೈ ಬಿಡುವುದಿಲ್ಲ ಎಂದು ಲೋಕಸಭಾ ಚುನಾವಣೆ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ರೋಡ್ ಶೋ ಮಾಡುವ ಮೂಲಕ ಚುನಾವಣಾ ಪ್ರಚಾರ ಮಾಡಿದ ನಂತರ ಅವರು ಮಾತನಾಡಿದರು. ಕಳೆದ 5 ವರ್ಷದಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ 16 ಸಾವಿರ ಕೋಟಿ ರೂ. ನಿಧಿ ತಂದು ಅಭಿವೃದ್ಧಿ ಕೆಲಸಕ್ಕೆ ವಿನಿಯೋಗ ಮಾಡಿದ್ದೇನೆ. ಜಿಲ್ಲೆಯ ಅನೇಕ ರಸ್ತೆಗಳನ್ನು ವಿಸ್ತರಣೆ ಮಾಡಿಸಿದ್ದೇನೆ. ಕ್ಷೇತ್ರದ ಜನರ ಕೆಲಸ ಮಾಡುವ ವಿಷಯದಲ್ಲಿ ನಾನು ಎಂದೂ ಉದಾಸೀನ ಮಾಡಿಲ್ಲ ಎಂದರು.
ಆಲೂರಿನ ಜನರು ತಮ್ಮ ಊರಿನಲ್ಲಿ ರೈಲು ನಿಲುಗಡೆ ಬೇಕು ಎಂದರು. 4 ರೈಲುಗಳು ನಿಲ್ಲುವಂತೆ ಮಾಡಿಕೊಟ್ಟೆ. ನಾನು, ನನ್ನ ಕುಟುಂಬದವರು ಯಾವಾಗಲೂ ಜನರ ನಡುವೆಯೇ ಇರುತ್ತೇವೆ. ಜನ ಸೇವೆಗೆ ಸಿಕ್ಕೇ ಸಿಗುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ರೇವಣ್ಣ ಸಚಿವರಾಗಿದ್ದಾಗಲೂ ಹೊಳೆನರಸೀಪುರದಲ್ಲೇ ಹೆಚ್ಚು ಇರುತ್ತಿದ್ದರು. ಜನರು ಕೆಲಸ ಮಾಡಿಕೊಡುವವರನ್ನು ಆರಿಸುತ್ತಾರೆ. ನಾವು ಹಾಸನ ಜಿಲ್ಲೆ ಹಾಗೂ ಹೊಳೆನರಸೀಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈ ಬಾರಿಯ ಸಂಸತ್ ಚುನಾವಣೆ ಜಾತಿ ಆಧಾರದಲ್ಲಿ ನಡೆಯುತ್ತಿಲ್ಲ. ದೇಶದ ಅಭಿವೃದ್ಧಿಗಾಗಿ ಜನರು ಮೋದಿಗೆ ಮತ ಹಾಕುತ್ತಾರೆ. ಎಲ್ಲಾ ಸಮೀಕ್ಷೆಗಳೂ ಬಿಜೆಪಿ ಹಾಗೂ ಮೈತ್ರಿ ಕೂಟಕ್ಕೆ 400 ಕ್ಕೂ ಹೆಚ್ಚು ಸ್ಥಾನ ದೊರಕುತ್ತದೆ ಎಂದು ಹೇಳುತ್ತಿವೆ. ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಮಾಡಲು ಹೋದಾಗ ನಮಗೆ ಜನರು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನನ್ನ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ. ಹಾಗಾಗಿ ಗೆಲುವು ಖಚಿತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net