ಪ್ರಜ್ವಲ್ ರೇವಣ್ಣನ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ: ಸಿದ್ದರಾಮಯ್ಯ

siddaramaiah
Published on

ಮೈಸೂರು: ಪ್ರಜ್ವಲ್ ರೇವಣ್ಣನವರ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲೀ, ಸರ್ಕಾರದ ಯಾರೊಬ್ಬರೂ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೆ ಎಸ್‌ಐಟಿ ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ. ಸಿಬಿಐಗೆ ಪ್ರಕರಣ ವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಜೆಡಿಎಸ್ ಬಿಜೆಪಿ ನಾಯಕರಿಂದ ಆಗ್ರಹ ಕೇಳಿಬಂದಿರುವುದಕ್ಕೆ ಪ್ರತಿಕ್ರಿಯಿಸಿದರು.

ಎಸ್‌ಐಟಿ ಬಿಟ್ಟು ಇನ್ಯಾರ ಮೇಲೆ ನಂಬಿಕೆ ಇಡ್ತೀರಿ. ಸಿಬಿಐಗೆ ಕೊಟ್ಟ ಕೇಸ್ ನಲ್ಲಿ ಯಾರಿಗೆ ಶಿಕ್ಷೆಯಾಗಿದೆ ಹೇಳಿ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೊಲೀಸರ ಬಗ್ಗೆ ನಂಬಿಕೆಯಿದೆ. ಅವರು ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ಕೊಡುತ್ತಾರೆ. ಹೀಗಾಗಿ ಸಿಬಿಐಗೆ ಪ್ರಕರಣ ವಹಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐಗೆ ಕರಪ್ಶನ್ ಬ್ಯೂರ್ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. ಈಗ ನೋಡಿದರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ ಏನು? ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ. ನಾನು ಯಾವತ್ತು ಪೊಲೀಸರಿಗೆ ಕಾನೂನಿನ ವಿರುದ್ಧವಾಗಿ ತನಿಖೆ ಮಾಡಿ ಅಂಥ ಹೇಳುವುದಿಲ್ಲ. ಎಸ್‌ಐಟಿ ಮೇಲೆ ನಂಬಿಕೆ ಇಡಬೇಕು. ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು.

ಈ ಹಿಂದೆ ಸಿಬಿಐಗೆ ನಾವೇ ಲಾಟರಿ ಕೇಸ್, ಜಾರ್ಜ್ ಕೇಸ್ ಹಾಗೂ ಡಿ.ಕೆ. ರವಿ ಕೇಸ್ ಕೊಟ್ಟಿದ್ದೇವು. ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ? ಹಾಗಂತ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ. ಈ ಪ್ರಕರಣದಲ್ಲಿ ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net