

ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಅವರದ್ದು ಲೈಂಗಿಕ ಹಗರಣವಲ್ಲ. ಅವರು ಮಾಡಿರುವುದು ಸಾಮೂಹಿಕ ಅತ್ಯಾಚಾರ. 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರೊಬ್ಬ ಮಾಸ್ ರೇಪಿಸ್ಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಮಹಿಳೆಯ ಮೇಲೆ ಹೀನ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದಿದ್ದರೂ ಪ್ರಧಾನಿ ನರೇಂದ್ರ ಮೋದಿ ಪ್ರಜ್ವಲ್ ಪರವಾಗಿ ಮತಯಾಚಿಸಿದ್ದಾರೆ. ಪ್ರಜ್ವಲ್‌ಗೆ ಮತ ನೀಡುವ ಮೂಲಕ ನನಗೆ ಸಹಾಯ ಮಾಡಿ ಎಂದು ಸಾರ್ವಜನಿಕ ಸಮಾವೇಶದಲ್ಲಿ ಹೇಳಿದ್ದಾರೆ. ಹೀಗಾಗೀ ಮೋದಿ ಮಹಿಳೆಯರ ಕ್ಷಮೆ ಕೋರಬೇಕು ಎಂದು ಪ್ರಧಾನಿ ವಿರುದ್ಧವೂ ಟೀಕಾ ಪ್ರಹಾರ ನಡೆಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಗುರುವಾರ ಏರ್ಪಡಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕೇವಲ ಮೋದಿ ಮಾತ್ರವಲ್ಲ. ಪ್ರಜ್ವಲ್ ಮಾಡಿರುವ ಕುಕೃತ್ಯದ ಬಗ್ಗೆ ಬಿಜೆಪಿಯ ಹಲವು ನಾಯಕರಿಗೆ ಮೊದಲೇ ಮಾಹಿತಿಯಿತ್ತು. ಆದರೂ ಅಧಿಕಾರ ಪಡೆಯುವುದಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿರುವ ಬಿಜೆಪಿಯವರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರು ಎಂದು ಹೇಳಿದರು.
ಸಿಬಿಐ, ಗುಪ್ತಚರ ಸೇರಿದಂತೆ ಮಹತ್ವದ ಏಜೆನ್ಸಿಗಳೆಲ್ಲವೂ ಪ್ರಧಾನಿ ಕೈಯಲ್ಲೇ ಇದೆ. ಅವರಿಗೆ ಎಲ್ಲ ಮಾಹಿತಿಯೂ ಇರುತ್ತದೆ. ಆದರೂ ಪ್ರಜ್ವಲ್ ದೇಶ ಬಿಟ್ಟು ಹೋಗಲು ಅವಕಾಶ ನೀಡಲಾಯಿತು. ಇದಕ್ಕಾಗಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ದೇಶದ ಜನರಿಗೆ ಕೈ ಮುಗಿದು ಕ್ಷಮೆ ಕೋರಬೇಕೆಂದರು.