ಕಲಿತ ವಿದ್ಯೆಯಿಂದ ಮಾನವೀಯ ಮೌಲ್ಯ ಲಭಿಸಲಿ

Prajnaloka
ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ 'ಪ್ರಜ್ಞಾಲೋಕ' ಕೃತಿಯನ್ನು ಡಾ. ಎಂ.ಆರ್​. ಹೆಗಡೆ ಬಿಡುಗಡೆ ಮಾಡಿದರು. ಡಾ. ಮಂಜುನಾಥ ಕರಬ, ಡಾ. ಟಿ.ಎಸ್​. ರಮೇಶ್​, ಎನ್​.ಆರ್​. ದಾಮೋದರ ಶರ್ಮ, ಡಾ.ವಿನಯಕುಮಾರ್​, ವಿಜಯಲಕ್ಷ್ಮೀ ಇದ್ದರು.
Published on

ಡಾ.ಎಂ.ಆರ್​.ಹೆಗಡೆ ಆಶಯ -- ಡಾ. ಕರಬ ರಚಿಸಿದ 'ಪ್ರಜ್ಞಾಲೋಕ' ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಕಲಿತ ವಿದ್ಯೆಯಿಂದ ವಿನಯ, ತಾಳ್ಮೆ, ಸಹನೆ ಹಾಗೂ ಮಾನವೀಯ ಮೌಲ್ಯ ಲಭಿಸುವಂತಾಗಬೇಕು. ಇಲ್ಲದಿದ್ದಲ್ಲಿ ಪದವೀಧರರಾಗಷ್ಟೇ ಇರಬೇಕಾಗುತ್ತದೆ. ಹೀಗಾಗಿ 'ಪ್ರಜ್ಞಾಲೋಕ' ಕೃತಿ ಓದಿದರೆ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯ ಲಭಿಸಿ, ಪೂರ್ಣಪ್ರಜ್ಞರಾಗಲು ಸಾಧ್ಯ ಎಂದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂದ ಕಾರ್ಯಾಧ್ಯಕ್ಷ ಡಾ. ಎಂ.ಆರ್​. ಹೆಗಡೆ ಹೇಳಿದರು.

ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ಅವರು ರಚಿಸಿದ 'ಪ್ರಜ್ಞಾಲೋಕ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಭಾಗವತದ ವಿಶೇಷ ಜ್ಞಾನ

ಲೇಖಕರು ತಮ್ಮ ಕೃತಿಯಲ್ಲಿ ಮಾನವೀಯ ಮೌಲ್ಯ ಒಳಗೊಂಡ ವಿಷಯವನ್ನು 8 ವಿಭಾಗಗಳಲ್ಲಿ ಉಲ್ಲೇಖಿಸಿದ್ದಾರೆ. ಆರು ವಿಭಾಗಗಳ ಆರಂಭದಲ್ಲಿ ಮೊದಲಿಗೆ 6 ಸಾಲಿನ ಕವನ ಇದ್ದು, ಅದು ಆ ವಿಭಾಗದ ಪೂರ್ಣ ಸಾರ ಒಳಗೊಂಡಿದೆ. ಕೊನೆಯ ಎರಡು ವಿಭಾಗದಲ್ಲಿ ಭಾಗವತದ ವಿಶೇಷತೆ ಕುರಿತು ಇರುವ ವಿಶಿಷ್ಟ ಕೃತಿ ಇದಾಗಿದ್ದು, ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಂಸತಿಕ ವಿಭಾಗದ ಮುಖ್ಯಸ್ಥ ಡಾ. ಟಿ.ಎಸ್​. ರಮೇಶ್​ ಮಾತನಾಡಿದರು. ಐಕ್ಯುಎಸಿ ಸಂಯೋಜಕ ಡಾ.ವಿನಯಕುಮಾರ್​, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರೋಹಿಣಿ ಪ್ರಾರ್ಥಿಸಿದರು. ಲೇಖಕ ಡಾ. ಮಂಜುನಾಥ ಕೊರಬ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅನೂಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಂದ 'ಚೈತ್ರಾಂಜಲಿ' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬದುಕು ನವಿಲು ಗರಿಯಂತಿರಬೇಕು

ಬಾರ್ಕೂರಿನ ವಿದ್ವಾನ್​ ಎನ್​.ಆರ್​. ದಾಮೋದರ ಶರ್ಮ 'ತನುವು ನಿನ್ನದು-ಮನವು ನಿನ್ನದು' ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಎಲ್ಲಿ ಭಾವನೆಗಳಿಗೆ ಬೆಲೆ ಹಾಗೂ ಜಾಗ ಇಲ್ಲವೋ ಅಲ್ಲಿ ಬದುಕಿಗೆ ಅರ್ಥವಿಲ್ಲ. ನಮ್ಮ ಬದುಕು ನವಿಲು ಗರಿಯಂತಿರಬೇಕು. ನವಿಲಿನ ದೇಹದಿಂದ ಉದುರಿದ ಆ ಗರಿ ಕೃಷ್ಣನ ಕೈ ಸೇರಿ ಮಹತ್ವದ ಸ್ಥಾನ ಪಡೆಯಿತು. ಅದೇ ರೀತಿ ನಮ್ಮೆಲ್ಲರ ಬದುಕೂ ಸಹ ಶ್ರೇಷ್ಠತೆ ಹೊಂದುವ ರೀತಿಯಲ್ಲಿ ಇರಬೇಕು ಎಂದರು. ಭಾರತದ ಶ್ರೇಷ್ಠತೆ, ತಾಯಿಯ ಮಹತ್ವ ಹಾಗೂ ತಂದೆಯ ವಿಶೇಷತೆಯ ಕುರಿತು ವಿದ್ಯಾರ್ಥಿಗಳಿಗೆ ಉದಾಹರಣೆ ಸಹಿತವಾಗಿ ಮನೋಜ್ಞವಾಗಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net