

ಮಳವಳ್ಳಿ: ಕಳೆದ ಎಂಟು ವರ್ಷದಿಂದ ಬಿಜೆಪಿ ದೇಶದಲ್ಲಿ ಅಧಿಕಾರ ನಡೆಸುತ್ತಿದೆ. ಆದರೆ ಬಡವರ ಜೀವನವನ್ನು ಯಾವ ರೀತಿ ಬದಲಾವಣೆ ಮಾಡಿದ್ದಾರೆ ಎನ್ನುವುದನ್ನು ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ರೋಡ್ ಷೋ ವೇಳೆ ಮಾತನಾಡಿದ ಅವರು, ಅನ್ನಭಾಗ್ಯ ಮತ್ತು ಹಾಲಿಗೆ ಪ್ರೋತ್ಸಾಹ ಧನ, ಬಿಸಿಯೂಟ ಸೇರಿದಂತೆ ಹತ್ತಾರು ಜನರಪ ಕಾರ್ಯಕ್ರಮವನ್ನು ಕಾಂಗ್ರೆಸ್ ನೀಡಿದೆ. ಶಿಕ್ಷಣ, ಆರೋಗ್ಯ, ಆಶ್ರಯ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಕುಮಾರಸ್ವಾಮಿ ಏನು ಕೊಟ್ಟಿದ್ದಾರೆ. ಇನ್ನು ಬಿಜೆಪಿಯವರು ವಿಷ ಬೀಜ ಬಿತ್ತುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದರು.
ಮೈಷುಗರ್ ಕಾರ್ಖಾನೆ ಮುಚ್ಚಲು ಬಿಜೆಪಿ ಹೊರಟಿದೆ. ಭದ್ರಾವತಿಯಲ್ಲಿನ ಕಾರ್ಖಾನೆ ಮಾರಾಟಕ್ಕೆ ಮುಂದಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗಿದೆ. ನಿಮ್ಮ ಆದಾಯ ಪಾತಾಳಕ್ಕೆ ಹೋಗಿದೆ. ಬೆಂಬಲ ಬೆಲೆ ಸಿಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಂದಾದರೂ ಅನುಕೂಲವಾಗುವ ಕೆಲಸ ಮಾಡಿದೀರಾ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಉದ್ಯೋಗಕ್ಕೆ ಕೋಟ್ಯಂತರ ಲಂಚ ನಡೆಯುತ್ತಿದ್ದರೂ ಗೃಹಮಂತ್ರಿ ಎಲ್ಲವೂ ಸರಿಯಿದೆ ಎನ್ನುತ್ತಿದ್ದಾರೆ. ನಿಮ್ಮ ಮಗನಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನಮಗೆ ಬೆಂಬಲ ಕೊಡಿ. ಸರ್ವರಿಗೂ ಸಮಪಾಲು, ಸಮಬಾಳು ನೀಡಲು ಶಕ್ತಿಯನ್ನು ನೀಡಿ ಈ ಭ್ರಷ್ಟ ಸರ್ಕಾರಕ್ಕೆ ತೊಲಗಿಸಲು ಶಕ್ತಿ ಕೊಡಿ. ಬಿಜೆಪಿಯವರು ಹದಿನೈದು ಲಕ್ಷ ರೂ ಕೊಡುತ್ತೇನೆಂದು ಹೇಳಿ ವಂಚಿಸಿದರು. ನಾವು ಆ ರೀತಿ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ವಿದ್ಯುತ್ ಮತ್ತು ಕುಡಿಯುವ ನೀರು, ಆಸ್ಪತ್ರೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಜತೆಗೆ ವಿಶೇಷ ಶಾಲೆಗಳ ಮಾಡಿದ್ದು ಕಾಂಗ್ರೆಸ್. ಆದರೆ ತಿಟ್ಟಮಾರನಹಳ್ಳಿ, ಕಿರುಗಾವಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಕುಮಾರಣ್ಣನ ಸರ್ಕಾರದಲ್ಲಿ ಏಕೆ ಪೂರ್ಣ ಮಾಡಲು ಇಲ್ಲಿನ ಶಾಸಕರು ಮುಂದಾಗಿಲ್ಲ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರವನ್ನೂ ಜೆಡಿಎಸ್‌ಗೆ ಕೊಟ್ಟರೂ ಋಣ ತೀರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಲಿಲ್ಲ. ಎಲ್ಲ ಸ್ವಸಹಾಯ ಸಂಘಗಳ ಸಾಲಮನ್ನವೆಂದು ಹೇಳಿದ್ದರು. ಆದರೆ ಅದನ್ನು ಮಾಡಲಿಲ್ಲ ಎಂದು ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಎಂಎಲ್‌ಸಿ ದಿನೇಶ್‌ಗೂಳಿಗೌಡ, ಸಿ.ಡಿ.ಗಂಗಾಧರ, ಮಲ್ಲಾಜಮ್ಮ, ಕೆ.ಜೆ.ದೇವರಾಜು, ಎಸ್.ಪಿ.ಸುಂದರ್‌ರಾಜ್, ಡಾ.ಮೂರ್ತಿ, ಎಂ.ಬಿ.ಮಲ್ಲಯ್ಯ, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾರಾಜು ಇದ್ದರು.