ಮೈಸೂರು: ದೇಶಕ್ಕೆ ಸ್ವಾತಂತ್ರೃ ಬಂದ ಅಂಗವಾಗಿ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ದೇಶದ ಪ್ರಧಾನಿಯಾಗಿ ಒಂದು ವರ್ಗಕ್ಕೆ ಸೀಮಿವಾಗಿರುವ ಆರ್‌ಎಸ್‌ಎಸ್ ಹೊಗಳಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿದೆ ಎಂದು ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ ಟೀಕಿಸಿದರು.
ಆರ್‌ಎಸ್‌ಎಸ್ ಕಚೇರಿಯಲ್ಲಿ 2001ರವರೆಗೆ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಹಿಂದು ಧರ್ಮವನ್ನು ರಾಜಕೀಯ ಆಯುಧ ಮಾಡಿಕೊಂಡು ಭಾರತೀಯರನ್ನು ಒಡೆದಾಳಿರುವ ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿ ಈಗ ಹೊಗಳುತ್ತಿರುವುದು ಹಲವು ಸಂದೇಹಗಳನ್ನು ಹುಟ್ಟಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ತಿಂಗಳಿಗೆ ನರೇಂದ್ರ ಮೋದಿ ಅವರಿಗೂ 75 ವರ್ಷ ತುಂಬಲಿದೆ. ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದಾಗ ರಾಜಕೀಯದಿಂದ ಕೆಳಗಿಳಿಸಿದ ಸೂತ್ರ ತಮಗೂ ಅನ್ವಯಿಸಬಹುದು ಎಂಬ ಭಯ ಪ್ರಧಾನಿಗೆ ಕಾಡುತ್ತಿದೆ. ಹೀಗಾಗಿ ಪ್ರಧಾನಿ ಪಟ್ಟ ಉಳಿಸಿಕೊಳ್ಳುವ ತವಕ ಅವರಿಗೆ ಹೆಚ್ಚಾಗಿದ್ದು, ಹೊಗಳುವ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ.
ಮತಕಳ್ಳತನ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗಳಿಗೆ ಈವರೆಗೂ ಚುನಾವಣಾ ಆಯೋಗ ಉತ್ತರಿಸಿಲ್ಲ. ಆದರೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ರಾಹುಲ್ ಗಾಂಧಿಗೆ ತಾಕೀತು ಮಾಡುತ್ತಿದೆ. ಕೇರಳದಲ್ಲಿ ಮತ ಕಳವು ನಡೆದಿದೆ ಎಂದು ಬಿಜೆಪಿಯ ಅನುರಾಗ್ ಠಾಕೂರ್ ಆರೋಪಿಸಿದಾಗ ಅವರನ್ನು ಏಕೆ ಪ್ರಮಾಣ ಪತ್ರ ಕೇಳಲಿಲ್ಲ ಎಂದು ಪ್ರಶ್ನಿಸಿದರು.