ರಂಗ ಕಲಾವಿದರ ಸಾಧನೆಗೆ ಮೆಚ್ಚುಗೆ, ವಿಜಯಪುರದಲ್ಲಿ ವಿವಿಧ ಕ್ಷೇತ್ರ ಕಲಾವಿದರ ಸಮ್ಮೇಳನ ಸಾಧಕರಿಗೆ ಸನ್ಮಾನ

30-vij-1d-kalavidarugala sammelana
Published on

ವಿಜಯಪುರ: ಈ ಹಿಂದೆ ಜೀವನ ನಿರ್ವಹಣೆಗಾಗಿ ನಾಟಕ ರಂಗ ಮತ್ತಿತರೆ ಕಲೆ ಆಶ್ರಯಿಸಲಾಗುತ್ತಿತ್ತು. ಆದರೆ, ಇಂದು ಕಲಾವಿದರು ಕಲೆಗಳನ್ನು ಆರಾಧಿಸಿ, ಉನ್ನತ ಸಾಧನೆ ಮಾಡುತ್ತಿದ್ದಾರೆ ಎಂದು ಲೇಖಕಿ ಹಾಗೂ ಕವಯತ್ರಿ ಸ್ವರ್ಣಗೌರಿ ಮಹದೇವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ಮಹಂತಿನ ಮಠದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ರಂಗಕಲಾವಿದರು, ಯಕ್ಷಗಾನ ಕಲಾವಿದರು, ಜಾನಪದ ಕಲಾವಿದರು, ಭಾವಗೀತೆಗಳ ಕಲಾವಿದರು, ರಂಗ-ಸಂಗೀತ ಕಲಾವಿದರು, ರಂಗ-ಹಾರ್ಮೋನಿಯಂ ಕಲಾವಿದರು, ರಂಗ-ತಬಲಾ ಕಲಾವಿದರ ಸಮ್ಮೇಳನದಲ್ಲಿ ಮಾತನಾಡಿದರು.

ವೃತ್ತಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡವರ ಬದುಕು ಎಂದಿಗೂ ಹಸನಾಗಿರಲಿಲ್ಲ. ಅವರು ಸದಾ ಅಭದ್ರತೆ, ಹಸಿವು, ಕಷ್ಟ-ಕೋಟಲೆಗಳಲ್ಲಿ ಕಾಲ ಕಳೆಯುತ್ತಿದ್ದರು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ, ಕರೊನಾ ಸಂದರ್ಭದಲ್ಲಿ ಕಲಾವಿದರ ಬದುಕು ದುಸ್ತರವಾಗಿದೆ. ಅವರೆಲ್ಲರ ಸಂಕಷ್ಟಕ್ಕೆ ಸ್ಪಂದಿಸುವ, ಗುರುತಿಸುವ ಮತ್ತು ಅಭಿನಂದಿಸುವಂಥ ಕೆಲಸಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಕಲಾವಿದರಾದ ಕಂಠನ ಕುಂಟೆ ಕೃಷ್ಣಮೂರ್ತಿ, ನಾಗಮಂಗಲ ಅಪ್ಪಣ್ಣ, ರಬ್ಬನಹಳ್ಳಿ ಕೆಂಪಣ್ಣ, ಮೇಲೂರು ರಾಮಾಂಜನಪ್ಪ, ಮಹಾತ್ಮಾಂಜನೇಯ, ಜೆ.ಎಸ್. ಮುನಿನಾರಾಯಣ, ಜೆ.ಎಸ್. ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಹಾರೋಹಳ್ಳಿ ಸುಬ್ರಮಣಿ ಹಾಗೂ ಮುದುಗುರ್ಕಿ ಡಾ. ಮೋಹನ್ ಬಾಬು ಅವರಿಗೆ ರಂಗ ಕಲಾವಿದ ದಿ. ಎನ್. ರಾಜಗೋಪಾಲ್ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು.

ತಾಲೂಕು ಅಧ್ಯಕ್ಷ ಆರ್.ಕೆ. ನಂಜೇಗೌಡ, ಟೌನ್ ಕಸಾಪ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಕಾರ್ಯದರ್ಶಿ ಡಾ. ಎಂ.ಶಿವಕುಮಾರ್, ಎಚ್.ಎಸ್. ಶೇಷಗಿರಿರಾವ್, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಕೆ.ಮುರಳೀಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net