ಜನಸೇವೆ ಮಾಡುವಾಗ ಹೊಗಳಿಕೆ, ತೆಗಳಿಕೆ ಸಾಮಾನ್ಯ

30 ಎಸ್ಕೆಪಿ 4
ಶಿಕಾರಿಪುರದಲ್ಲಿ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್‌ನ್ನು ಸಿ.ಎಸ್.ಷಡಾಕ್ಷರಿ ಬಿಡುಗಡೆಗೊಳಿಸಿದರು. ಮಧುಕೇಶ್ವರ, ಮೋಹನ್ ಕುಮಾರ್, ಮಲ್ಲೇಶ್ ಬಿ.ಪೂಜಾರ್ ಇತರರಿದ್ದರು.
Published on

ಶಿಕಾರಿಪುರ: ಸರ್ಕಾರಿ ನೌಕರರು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗದೆ ಸುಲಲಿತವಾಗಿ ನಡೆಯುತ್ತಿವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ ಎಂಬ ಭಾವನೆ ಸದಾ ನಮ್ಮ ಹೃದಯದೊಳಗೆ ಸ್ಪುರಿಸುತ್ತಿರಬೇಕು. ಸರ್ಕಾರಿ ಕೆಲಸ ಎಂದರೆ ಅದೊಂದು ಸೇವೆ. ಸರ್ಕಾರಿ ನೌಕರರಿಗೆ ಜನಸೇವೆ ಮಾಡುವ ಸೌಭಾಗ್ಯ ದೊರೆತಿದೆ ಎಂದರು.
ನಿಮ್ಮ ಕೆಲಸ ನೀವು ಮಾಡಿ. ಜನಸೇವೆ ಮಾತಾಡುವಾಗ ಹೊಗಳಿಕೆ, ತೆಗಳಿಕೆಗಳು ಸಾಮಾನ್ಯ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸ್ಥಿತ ಪ್ರಜ್ಞರಾಗಿ ನಿಮ್ಮ ಕೆಲಸ ಮಾಡಿ. ಸಂಘಟನೆ ಕಟ್ಟಿ ಅದನ್ನು ಯಶಸ್ವಿಗೊಳಿಸುವದು ನಮ್ಮ ಉದ್ದೇಶ. ಸಂಘಟನೆ ಮುನ್ನಡೆಸುವಾಗ ಕಾಲೆಳೆಯುವವರು, ಹೀಗೆಳೆಯುವವರು ಜಾಸ್ತಿ. 22 ಯೋಜನೆಗಳನ್ನು ಜಾರಿಗೆ ತರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರ ಹಾಗೂ ಮಾರ್ಗದರ್ಶನ ನೆರವಾಯಿತು. ಇಂದು ಸರ್ಕಾರಿ ನೌಕರರ ಸಂಘ ತ್ರಿವಿಕ್ರಮನಂತೆ ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರು.
ಸಂಘದ ತಾಲೂಕು ಅಧ್ಯಕ್ಷ ಮಧುಕೇಶ್ವರ ಮಾತನಾಡಿ, ಸರ್ಕಾರಿ ನೌಕರರ ಸಂಘ ತನ್ನದೇ ಆದ ಶಿಸ್ತು, ಸಂಯಮದಿಂದ ಹೆಸರು ಮಾಡಿದೆ. ನಾವು ಜನಸಾಮಾನ್ಯರ ಸಮಸ್ಯೆಗಳಿಗೆ, ರೈತರ ಸಮಸ್ಯೆಗಳಿಗೆ ದನಿ ಆಗಬೇಕು. ಜನ ನಮ್ಮ ಮೇಲಿಟ್ಟ ನಂಬಿಕೆಯನ್ನು ಯಾವತ್ತೂ ಹುಸಿ ಮಾಡಬಾರದು. ನಾವು ಅಪ್ಪಟ ಜನಸೇವಕರು, ಜನಹಿತವೇ ನಮ್ಮ ಉಸಿರಾಗಬೇಕು. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ನಮ್ಮ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಗೌರವಾಧ್ಯಕ್ಷ ಪಾಪಣ್ಣ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net